December 17, 2013

'ಏನು?' ಅಂದರೆ
'ಸಂಸ್ಕಾರ' ಅಂದರು.
'ಯಾಕೆ?' ಅಂದರೆ
'ಧರ್ಮ' ಅಂದರು.
'ಹೇಗೆ?' ಅಂದರೆ
'ಶಾಸ್ತ್ರ'  ಅಂದರು.
'ಎಲ್ಲಿ?' ಅಂದರೆ
'ಹಿಂದುಸ್ಥಾನ' ಅಂದರು.
'ಎಷ್ಟು?' ಅಂದರೆ
'ಕರ್ತವ್ಯ' ಅಂದರು.
'ಯಾರು?' ಅಂದರೆ
'ನಮೋ' ಅಂದರು.
.
.
.
'ಬೇಡ' ಅಂದರೆ
'ರಕ್ಷಣೆ' ಅಂದರು.
'ಸಾಕು' ಅಂದರೆ
'ಜನ್ಮ' ಅಂದರು!!!

December 11, 2013

ಕೊಲ್ಲೋ ಚಳಿಯೊಡನೆ
ಅವಳ ನೆನಪುಗಳ
ಸರ್ಪಬಂಧ,
ಹೋಮ ಮಾಡಬೇಕಂತೆ!!!

December 8, 2013

ಸಾವಿರಾರು ಜನರಿಗಾಗಿ
ಒಂದು ರೈಲು ಓಡುತ್ತದೆ
ಹಳಿ ಸವೆಯುತ್ತದೆ;
ಲಕ್ಷಾಂತರ ಜನರಲ್ಲಿ
ಎಲ್ಲೋ ಒಬ್ಬ ಗಾಂಧಿ
ಒಬ್ಬ ಮಂಡೇಲಾ...
ಹೀಗೆಲ್ಲಾ ಅಂದುಕೊಳ್ಳುವಾಗ
ಜೋರು
ತೂಕಡಿಕೆ!!!

December 7, 2013

ಸೋಪಿನ ವಾಸನೆಯ ದೇಹಕ್ಕೆ
ಉಡಿದಾರ ಜನಿವಾರ
ವಿಭೂತಿ ಕುಂಕುಮ,
ನೀರಿನಂಥ ಮನಸ್ಸಿಗೆ
ಕದ್ದು ನೋಡಿದ ಪೋಲಿ ಸಿನೆಮಾ!!!

************************

ದ್ವೈತ ಬರೆದವರಿಗೂ
ಅದ್ವೈತ ಬರೆದವರಿಗೂ
ಕೊನೆಯಲ್ಲಿ ಸಮ ಪ್ರಮಾಣದ
ಹುಡಿಮಣ್ಣು ಸಿಕ್ಕಿತಂತೆ!!!

December 6, 2013

ನಡುರಾತ್ರಿ ರಸ್ತೆಯಲ್ಲಿ
ನಾವು ನಾಲ್ಕೇ ಮಂದಿ;
ನಾನೆಂಬ ನಾನು
ಇದ್ದರೂ ಇಲ್ಲದಂತಿರುವ ನಾಯಿ
ಮತ್ತು
ಭಿನ್ನ ಆಕಾರದ
ಆದರೆ ಒಂದೇ ಬಣ್ಣದ
ಎರಡು ನೆರಳುಗಳು!

December 1, 2013

ಗಡಿಯಾರದ ಮುಳ್ಳು ತಿರುಗಿದಂತೆಲ್ಲಾ
ಕಾಣೋ ಬಣ್ಣ ಬದಲಾಗುವುದು
ಸಹಜ,
ಕಾಣದ್ದು ಕೂಡ ಬದಲಾಗುವುದು
ವಿಪರ್ಯಾಸ!
ಕರ ಕರ ಅನ್ನುತ್ತಿದ್ದ
ಅಜ್ಜನ ಶ್ರಾದ್ಧದ ದಿನ
ಕರೀ ಕಾಗೆಯನ್ನು
ಹಸಿದ ಹೊಟ್ಟೆಯಿಂದ
'ಬಾ ಬಾ' ಅಂದರು,
ಬಿಸಿ ಬಿಸಿಯಾಗಿತ್ತು ವಡೆ!

ಮರುದಿನ ಪಾಪ
ಹೊಟ್ಟೆ ಹಸಿದು
'ಕಾ ಕಾ' ಎಂದ ಕಾಗೆಗೆ
ಕಲ್ಲು ಹೊಡೆದರು,
ಖಾಲಿಯಾಗಿತ್ತು ವಡೆ!!!

November 30, 2013

ಬೆಂಕಿಯಿಂದ ಬೆಂಕಿಗೆ
ಬದುಕು,
ಮಧ್ಯೆ ಮಾತ್ರ
ಬರೀ ಹಬೆ!

November 29, 2013


ಸಂಪಾದಕರು
ವಿಮರ್ಶಕರು
ಅದೆಷ್ಟೇ ಆಧುನಿಕರಾದರೂ
ಕಡೆಗೆ ಹುಡುಕುವುದು
ಒಳ್ಳೆಯ ಕವಿತೆಯನ್ನೇ!!!


**************

ಬಿಳಿ ಬಿಳಿ ಹಾಲಲ್ಲೂ
ಹಾಳಾಗಬಲ್ಲ
ಅನೈತಿಕತೆ!!!



**************

ಪೂರ್ತಿಯಾಗು ಅಂದರೆ
ನಿಂತಲ್ಲೇ ಅಂತ್ಯ
ಉದ್ಧಟ ಕವಿತೆಗೆ!


**************

ಪಡೆದು ತೀರಿದ ಸುಖ
ಬರೆದು ಮುಗಿಸಿದ ಕವಿತೆ
ವ್ಯರ್ಥ!



November 27, 2013

ದೇಶ ಬೆಳಗುತ್ತಿದೆ!
ಉರಿಯಲು ಹಗೆಯಿದೆ
ಉರಿಸಲು ಮೌಢ್ಯವಿದೆ
ಹಗುರಾಗಿ ಹಾರಲು
ಅಗಾಧ ಹಸಿವಿದೆ...
ಬೆಂಕಿ
ಅಭಿವೃದ್ಧಿಯ ವಿಳಾಸವಂತೆ!

November 25, 2013

ಹಿಂದುವೆಂದು
ಗರ್ವದಿಂದ ಘರ್ಜಿಸುವಾತ
ತಾನೊಬ್ಬ ಮನುಷ್ಯನೆಂದು
ಕನಸಿನಲ್ಲಿಯೂ ಪಿಸುಗುಟ್ಟಲಾರ!!!

November 24, 2013

ಹಳ್ಳಿ ಹಂಚಿನ ಮನೆಯಲ್ಲಿ
ತೋಟದ ಕೆಲಸ ಮುಗಿಸಿ
ತಲೆದಿಂಬಿಗೊರಗಿದ ಅಪ್ಪ
ಮಗನಲ್ಲಿ ಕಾಣುವ ಪ್ರತೀ ಕನಸಲ್ಲಿ
ರೈತನೊಬ್ಬನ ಕೊಲೆ!
ಎಚ್ಚರಾದದ್ದು ವೃದ್ಧಾಶ್ರಮದ
ಬೃಹತ್ ಕಿಟಕಿಯ ಬಿಸಿಲಿಗೆ!!!

November 23, 2013

ಇಲ್ಲಿ
ಎಲ್ಲ ಥರದವರೂ ಇದ್ದಾರೆ.
ಹವಿಸ್ಸು ತಿಂದು ಕೊಬ್ಬಿರುವ ದೇವರು
ಮತ್ತು
ಕಸ ತಿಂದು ಕೊಬ್ಬಿರುವ ಹಂದಿ;
ಬಿಳಿ ಧೋತ್ರ ಕೊಳಕಾಗಿಸಿಕೊಂಡ ವೈದಿಕರು
ಮತ್ತು
ಕೆಸರು ಗದ್ದೆಯಲಿ ಚಂದವಾಗಿರುವ ರೈತರು!!!

ಮೆಚ್ಚಿದ ಪುಸ್ತಕ

ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಓದುತ್ತಿದ್ದೇನೆ. ಮೇಲ್ವರ್‍ಗದ,ಮೇಲ್ಜಾತಿಯ ಬಹುತೇಕ ಮಂದಿ ಕಾಣದ ಮತ್ತು ಕಾಣಬಯಸದ ಜಗತ್ತನ್ನು ತೆರೆದಿಡುವ ಪುಸ್ತಕ ಇದು..ಇಲ್ಲಿ ಆಳುವವರ ಬಗ್ಗೆ ಆಕ್ರೋಶವಿದೆ,ಆದರೆ ಅದು ಸಿದ್ಧಲಿಂಗಯ್ಯನವರ ಕವನಗಳಲ್ಲಿರುವಂತೆ ಕೊಚ್ಚು,ಮುರಿ ಅನ್ನುವಂಥದ್ದಲ್ಲ..ಬದಲಿಗೆ ಸಮಾನತೆಯ ಕನಸನ್ನು ಪ್ರತೀ ಕ್ಷಣವೂ ಕಾಣುವಂಥದ್ದು.. ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಕೀಳು ಮನಸ್ಸಿನಿಂದ ಇನ್ನಾದರೂ ಹೊರಬರೋಣ ಎನ್ನುವಂಥದ್ದು...ಧರ್ಮದ ನೆಲಗಟ್ಟಿನ ಮೇಲೆ ದೇಶ ಕಟ್ಟಲು ಹೊರಟಿರುವ ಕುರುಡರ ಸಂತೆಯ ಮಧ್ಯೆ ಈ ಕಾರಣಕ್ಕಾಗಿಯೇ ದೇವನೂರು ಅತ್ಯಗತ್ಯವೆನಿಸುತ್ತಾರೆ...

November 21, 2013

ಪ್ರತಿಷ್ಥೆ,ಇಸಮ್ಮು
ವಾದ ವಿವಾದಗಳೆಲ್ಲ
ಬರೆದವರಿಗೆ;
ಈ ಪುಸ್ತಕಗಳು
ಕೊಂಡವರ ಜತೆ
ಆರಾಮಾಗಿ ಇದ್ದುಬಿಡುತ್ತವೆ!!!

*****************

ನೀರಂತೆ
ಕಾವ್ಯ
ಕುಡಿಯಲೇಬೇಕು!

*****************

ಕರಾವಳಿಯ
ಮಳೆ,ಬಿಸಿಲು
ಬಂದರೆ ಸಾಕೆಂದರೂ
ಮುಗಿಯುವುದಿಲ್ಲ
ಕಾವ್ಯದಂತೆ!

November 17, 2013

‌ನನಗೆ
ನನ್ನ ತೋರಿಸುವ
ಕನ್ನಡಿಯ ಬೆನ್ನ ಹಿಂದೆ
ಯಾರಿಗೂ ಕಾಣದ
ಅನಾಥ ಬಯಲು!

****************

ತುಂಬ ಕಾಯಿಸಬೇಡ ಗೆಳತಿ,
ಉಕ್ಕಿ ಚೆಲ್ಲೀತು
ಹಾಲು!

****************

ಪ್ರತೀ ಚೂರು
ಅಕ್ಷರದ ಬೆನ್ನಿಗೆ
ಏನೂ ಹುಟ್ಟದ
ಬರಡು ಸ್ಥಿತಿ... 

****************

ಕೆಟ್ಟದಾಗಿದ್ದರೂ
ಅನುಭವಗಳು
ಒಳ್ಳೆಯದು...

****************

ಬೆಳಕೆಂದರೆ ಬೆಳಕು
ಕತ್ತಲೆಂದರೆ ಕತ್ತಲು
ಬೇಕಾದ್ದು ಕಾಣುವುದು
ಕಣ್ಣಲ್ಲಿ ಮಾತ್ರ!

November 16, 2013

ಸಂತೆ

ಇವರೆಲ್ಲರೂ ಅವರೇ 
ಬೆಳಕ ಕಾಣದ ಬಿಳಿ ಹುಡುಗಿ 
ದೃಷ್ಟಿ ಬೊಟ್ಟಿಡದ ಕಪ್ಪು ಹುಡುಗಿ
 ಪೊರಕೆಗಳ ಹೊತ್ತ ಘಾಟಿ ಮುದುಕಿ 
ಸೊಪ್ಪು ಮಾರುವ ಪುಟ್ಟ ಕಿರಣ 
'ಧಾ ರೂಪಾಯ್ ಪನ್ನಾಸ್'
'ರುಚಿ ನೋಡಿ ರೇಟು ಮಾಡಿ'
ಹರಕು ಚಪ್ಪಲಿಯ ಹುಳುಕು ಅರ್ಚಕ 
ಕಡ್ಡಿ ಗಡ್ಡದ ಬುಡಾನ್ ಸಾಬಿ 
ಕಿರಾಣಿ ಅಂಗಡಿಯ ತಕರಾರುಕರ 
ದೊಗಳೆ ಅಂಗಿಯ ಕುಳ್ಳ ಮಾಸ್ತರ 
ಪ್ಯಾಂಟು ನೈಟಿ ಇತರೆ ವಸ್ತ್ರ 
ಇಪ್ಪತ್ತು ರೂಪಾಯಿಗೆ ಗಿಣಿ ಶಾಸ್ತ್ರ 
ಬೋಂಡ ಹಪ್ಪಳ ಹಂದಿ ಸೊಳ್ಳೆ 
ಹೂವು ಸಗಣಿ ಈರುಳ್ಳಿ ಬಳೆ 
ಬೇರು ವಾಚು ಒಣಗಿದ ಮೀನು 
ಕನ್ನಡಿ ಬೂದಿ ಗುಡ್ಡದ ಜೇನು 
ಅಮ್ಮನ ಕುಂಕುಮ ಫ್ರೇಮಿನ ರಾಮ 
ಹಾಡುವ ಸೀತೆ ಬೇಡುವ ಹನುಮ... 

ಇವರೆಲ್ಲರೂ ಅವರೇ 
ತಪ್ಪುಗಳ ಮಧ್ಯೆ ಹುಟ್ಟಿ 
ತಪ್ಪುತ್ತಲೇ ಬೆಳೆದು 
ಒಪ್ಪಿಸಲಾಗದೆ ಓಡಿ 
ಹೊಟ್ಟೆ ತುಂಬಲು 
ಮಾರಾಟಕ್ಕಿಳಿದವರು. 

ಇರುವ ತಪ್ಪಿಗೆ 
ಕಿರುಚಿ ನಾರುವ ಈ ಬೀದಿ 
ನಿನ್ನೆ ಖಾಲಿ ನಾಳೆಯೂ ಖಾಲಿ.

ಅದೇ ಮುಖದ ಅದೇ ಚೌಕಾಸಿಯ 
ಅದೇ ತೂಕದ ಅದೇ ಲೆಕ್ಕದ 
ಲಾಭ ನಷ್ಟದ 
ದಣಿವು ಕಾಣದ 
ಅದೇ ಸಂತೆಯ ಅದೇ ವ್ಯಾಪಾರ 
ಈ ಕ್ಷಣದ ಸತ್ಯ,
ಕಳೆದುಹೋಗುವ ಮುನ್ನ 
ಕೊಂಡುಕೊಳ್ಳಿ!
ಹೊಸತಾಗಿ ಬರೆಯಬೇಕೆಂದುಕೊಂಡವ
ಹಳತನ್ನೇನಾದರೂ ಓದಿಬಿಟ್ಟರೆ 
ಅದು ಅವನ ಸಾವು!!!

*************************

ಜೈಲಲ್ಲಿ ಆರಾಮಾಗಿ
ನಿದ್ದೆ ಮಾಡುವವನು 
ಸ್ವರ್ಗ ಸೇರಲು 
ಪುಣ್ಯ ಮಾಡಬೇಕಿಲ್ಲ!!!

June 9, 2013

ಈ ಮಧ್ಯರಾತ್ರಿ
ಸುಮ್ಮನೆ ಕೂರುವ
ಸೊಳ್ಳೆ ಹೊಡೆಯುವ
ಆಕಳಿಸುವ
ನೋಡುವ
ಓದುವ
ಕೇಳುವ
ಹರಟುವ
ಆಡುವ
ಅಲೆವ
ಕಳೆವ
ಬದಲು
ಬರೆ-
ಯುತ್ತಿದ್ದೇನೆ!!!
ಏಳು,ತಿನ್ನು
ಕೆಲಸ ಮಾಡೆಂದ ಅಮ್ಮ
ಬರೆ ಅನ್ನಲಿಲ್ಲ.
ಹೊಸ ಹೆಂಡತಿಯಂತೆ
ಮುನಿಸಿಕೊಂಡು ಕವಿತೆ ಕೇಳುತ್ತಿದೆ
'ಆರು ಹಿತವರು ನಿನಗೆ
ನಮ್ಮೀರ್ವರೊಳಗೆ?!!!'

June 5, 2013

ಖ್ಯಾತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರ 'ಸುನೇರಿ'ಯನ್ನು ಮತ್ತೆ ಓದುತ್ತಿದ್ದೇನೆ. ತುಂಬಾ ಇಷ್ಟವಾದದ್ದು ಲೇಖಕಿಯ ironic language. ಉದಾಹರಣೆಗೆ,

' ಈ ಭೂಮಿ_
ಒಂದು ಸುಂದರ ಪುಸ್ತಕ.
ಸೂರ್ಯ ಚಂದ್ರರೇ ಅದರ ರಕ್ಷಾಪತ್ರ.

ಆದರೆ_
ಹಸಿವು
ಬಡತನ
ದಾಸ್ಯ...

ದೇವರೇ,
ಇದೇನು ನಿನ್ನ ಪ್ರವಚನಗಳೆ?
ಅಥವಾ
ಬರಿಯ ಅಚ್ಚಿನ ತಪ್ಪುಗಳೆ? '

ಸುಮ್ಮನೆ ಕೂತಾಗ ಓದಿ ಅನುಭವಿಸಬಹುದಾದ ಇಂಥ ಹಲವು ಕವನಗಳು 'ಸುನೇರಿ'ಯಲ್ಲಿವೆ. ಮಡಿವಂತಿಕೆಯಿಂದ ದೂರದಲ್ಲಿಯೇ ಉಳಿಯುವ ಅಮೃತಾ ಪ್ರೀತಮ್ ಓದುಗರಿಗೆ ಆಪ್ತವಾಗುತ್ತಾರೆ. ಭಾರತದ ಮಟ್ಟಿಗೆ ಹೀಗೆ ಬದುಕಿದಂತೆಯೇ ಬರೆದ ಲೇಖಕಿಯರು ತುಂಬಾ ವಿರಳ....

June 3, 2013

ಗುಳ್ಳೆ...
ಅವನಜ್ಜ ಹಾರಿಸಿರಬಹುದು
ಮೊಮ್ಮಗ ಹಾರಿಸಬಹುದು
ಅವರಂತೆ ಇವನಿಗೂ ಅದು ಕ್ಷಣಿಕ ಸುಖ...
ಆದರೆ ಸುಖ-ದುಃಖ-
ದ ಅನುಭವಕ್ಕೂ ಸಮಯವಿಲ್ಲ,
ಹುಟ್ಟುತ್ತಲೇ ಯಾರಿಗೂ ಅರ್ಥವಾಗದ
ಸಾವಿನ ಭಯ
ಗುಳ್ಳೆಗೆ!

May 30, 2013

ದೀಪ ಚೆಲ್ಲಿದ ಬೆಳಕು
ನನ್ನ ತಲುಪುವ ತನಕ
ದಾರಿ ತುಂಬಾ ಕತ್ತಲು.
        ಆದರೂ ಸಾಗಲೇ ಬೇಕು
        ನಾನು,ಬೆಳಕು...

May 14, 2013

ಅದೇ ಕ್ಷಣಿಕ ಭೇಟಿ
ಅದೇ ಕ್ಷಣಿಕ ನಗು
ಮಾತು,ಬಂಧ,ಪ್ರೀತಿ...
ಮತ್ತೆ ಕ್ಷಣಿಕ ಬಿರುಕು
ಒಡೆಯುತ್ತಲೇ ಬೆಳೆವ ಬದುಕು
ಖಾಲಿ ಹಾಳೆಯ ಮೇಲೆ
ಕವಲು ಪದಗಳ ಕೊಂಕು.
ಸಾಕಾಗಿದೆ ಗೆಳತಿ,
ಬಾ
ಶಾಶ್ವತವಾಗೋಣ... 

March 25, 2013

ಕಚ್ಚಿದ ಇರುವೆ
ತಕ್ಷಣ ಕೇಳಿತು
'ಹಳೇ ನೋವುಗಳು ದೊಡ್ದವೋ?
ಹೊಸ ನೋವು ದೊಡ್ಡದೋ?'
ಇಲ್ಲ...ಆ ಕ್ಷಣ
ನನ್ನಲ್ಲಿ ಉತ್ತರವಿರಲಿಲ್ಲ.

March 10, 2013

ಆ ದಿನ-ಈ ದಿನ

( ಆಶುಕವನ ಸ್ಪರ್ಧೆಯಲ್ಲಿ ಬರೆದ ಕವನ )

ಮಾಲಿನಲಿ ಕೊಂಡು,ಓವನ್ನಿನಲಿ ಬೇಯಿಸಿ
ಫ್ರಿಡ್ಜಿನಲ್ಲಿಟ್ಟು ಕೊಳೆಸಿ,ಟ್ರಾಫಿಕ್ ಜ್ಯಾಮು ಹಚ್ಚಿ ತಿಂದು
ಈವ್ನಿಂಗ್ ವಾಕು ಮಾಡಿ ಜೀರ್ಣಿಸಿ
ಫಾರಿನ್ ಟಾಯ್ಲೆಟ್ಟಿನಲ್ಲಿ ಒರೆಸಿಕೊಂಡು
ವೀಕೆಂಡಿನಲ್ಲಿ ವಿರಮಿಸಿಕೋ
ಲೈಫು ಇಷ್ಟೇನೆ!
 * * * * * * * * *
 ಆ ದಿನ
ಈ ದಿನ-
ದಂತಿರಲಿಲ್ಲ.
ಅಮ್ಮನ ದೋಸೆ,ಅಪ್ಪನ ಮೀಸೆ
ಅಜ್ಜನ ಕುರ್ಚಿ,ಅಜ್ಜಿಯ ಸೀರೆ
ಬೀರನ ಕಾಡು,ಶಾಲೆಯ ಹಾಡು
ಮನಸ್ಸಾದಾಗ ಮರಕ್ಕೆ ಕಲ್ಲು
ರಾಮನ ಪ್ರೇಮ ಪ್ರಸಂಗದ ಗುಲ್ಲು
ಕೆರೆ ಬದಿಗಿನ ಓಪನ್ ಟಾಯ್ಲೆಟ್ಟು
ಅಡಗಿಸಿಡುತಿದ್ದ ಬೀಡಿಯ ಕಟ್ಟು
ಹರಕು ಪರದೆಯ ಹಳೇ ಸಿನೆಮಾ
ಉಕ್ಕಿ ಬರುತಿದ್ದ ಹರೆಯದ ಕಾಮ
                     ಅದು ಕಾಮೆಡಿಯೋ ?
                     ಇದು ಟ್ರ್ಯಾಜೆಡಿಯೋ ?
ಅಲೆದಲೆದು ಸೇರಿದ ಯುನಿವರ್ಸಿಟಿಯಲಿ
ಉತ್ತರ ಸಿಗಲಿಲ್ಲ,ಬದಲಿಗೆ
ಬದಲಾಯಿತು ಎಲ್ಲ!
           ಬಾ,ಕೂರು,ಕೇಳು,ನಡೆ
           ಬರೆ,ಎಣಿಸು,ನಗು,ಹಾಳಾಗು
           ಶಬ್ದಕೋಶದ ಹಾಳೆ ಕಳೆದು
           ಉಳಿದದ್ದು ಯಂತ್ರದ ಬಿಡಿ ಭಾಗವಾಯಿತು
           ಖಂಡಿತ,ಯಾರಿಗೋ ಲಾಭವಾಯಿತು!
ಆಯಿತು,
ಕವಿತೆಯಾಯಿತು,ಚಿತ್ರವಾಯಿತು
ಸದ್ದಾಯಿತು,ಅನುಭವವಾಯಿತು
ಆಗುತ್ತಲೇ ಉಳಿಯಿತು
ಕರಕಲು ಕನಸು ಉಳಿಯಿತು.
 * * * * * * * * * * * * * *
ಇಂದು ಮುಂದಿನ ಹಿಂದೆ
ಉಳಿಯದ,ಅಳಿಯದ
ಆ ದಿನ
ನೆನಪು
ಬೆಳಕು
ಗಂಧ
ಇನ್ನೂ ಏನೇನೋ... 

March 4, 2013

ಕೇಸರಿ ಬಣ್ಣದ ಪೆಟ್ರೋಲಿನಿಂದ
ಬೆಂಕಿ ನಂದುವುದಿಲ್ಲ,
ಬಣ್ಣವಿಲ್ಲದ ನೀರಿನ ತಂಪನ್ನು
ನಮ್ಮ 'ದೇಶಭಕ್ತರು' ಕಂಡಿಲ್ಲ!

ಯುದ್ಧಗೀತ


ನಾನು ಯುದ್ಧ ಕಂಡಿಲ್ಲ.

ಉಪಾಯ ಹೂಡಿ,ಮೋಸ ಮಾಡಿ
ಆನೆ ಕುದುರೆ ಸೈನ್ಯ ಕಟ್ಟಿ
ರಥ ಹತ್ತಿ ಮಾಡುವ ಯುದ್ಧಕ್ಕಿಂತ
ಈಗಿನ ಕ್ಷಿಪಣಿ-ಅಣುಬಾಂಬುಗಳವರೆಗೆ
ಕೇಳಿದ್ದು ಕಥೆಯಲ್ಲೇ
ಓದಿದ್ದು ಪುಸ್ತಕದಲ್ಲೇ
ನೋಡಿದ್ದು ಟೀವಿಯಲ್ಲೇ!

ಆದರೂ,
ಬಾಣಬಿಟ್ಟು ಸುಮಾರು ಹೊತ್ತು ಕಾಯುವ
ಬಾಂಬುಹಾಕಿ ಎಲ್ಲ ನೆಲಸಮಮಾಡುವ
ಯುದ್ಧಗಳಿಗಿಂತ ಚಂದ ಮತ್ತು ಮಜ
ಮಶೀನು ಗನ್ನಿನ ಯುದ್ಧ!

ಶಬ್ದ ಬರುವ ಹೊತ್ತಿಗೆ
ಗುಂಡು ಒಂದರ ಹಿಂದೆ ಮತ್ತೊಂದು
ನಿಷ್ಠೆಯಿಂದ,ಶಿಸ್ತಿನಿಂದ,ದರ್ಪದಿಂದ
ಸಾಲಾಗಿ ಒಳನುಗ್ಗಿ ಎದೆ,ಹೊಟ್ಟೆ ಮತ್ತೆ
ಕೆಲವೊಮ್ಮೆ ತಲೆಚಿಪ್ಪಿನ ಒಳಗೆಲ್ಲೋ
ಅವಿತು ಕುಳಿತು ಚಿಮ್ಮಿಸುವ
ಬಿಸಿ ರಕ್ತದ ಹನಿಗಳು
ನೆಲ ತಲುಪುವ ಮೊದಲೇ
ಯಾರಿಗೂ ಕಾಣದಂತೆ ಪ್ರಾಣಪಕ್ಷಿಯ
ರೆಕ್ಕೆ ಕಿತ್ತು ಹಾರಿಸುವ ಯುದ್ಧ!

ಈ ಹಾಳು ಯುದ್ಧದ ವಿಷಯದಲ್ಲೇ
ಕೆಲವು ಅಸ್ಪಷ್ಟತೆಗಳು ಕೂಡ:
ಯಾವತ್ತಾದರೂ ಮಾಡಲೇಬೇಕಾದ ಯುದ್ಧಕ್ಕೆ
ತಾತ್ಕಾಲಿಕ ವಿರಾಮ,
ಕೆಲವು ದೇಶಗಳ ಮಧ್ಯೆ ಮಾತ್ರ ಯುದ್ಧ
ಕೆಲವದರ ಮಧ್ಯೆ ಮೈತ್ರಿ-ಒಪ್ಪಂದ,
ಹಪ್ಪಳ ಸಂಡಿಗೆಗಳಂತೆ ಕೂಡಿಟ್ಟ
ಶಸ್ರ್ತಾಸ್ತ್ರಗಳ ಪ್ರಾಯೋಗಿಕ ಪರೀಕ್ಷೆ,
ದೇಶದ ಕೋಟಿ ಜನರಲ್ಲಿ
ಕೆಲವರಿಗೆ ಮಾತ್ರ ಸೈನ್ಯ ತರಬೇತಿ,
ಯುದ್ಧ ಕಂಡರಿಯದವನಿಂದ
ಉದ್ದದ ದೇಶಭಕ್ತಿಗೀತೆ,
ಗುಂಡು ತಿಂದು ಸತ್ತವನೆದುರು
ರಾಷ್ಟ್ರಗೀತೆ,ಗಾಳಿಯಲ್ಲಿ ಗುಂಡು!

ಹಾರಿದ ಗುಂಡು ವಾಪಸ್ಸು ಬಂದಿದ್ದನ್ನು
ಯಾರೂ ಕಂಡಿಲ್ಲ!