January 31, 2014

ಆದರ್ಶಗಳ
ಪಾಪಸ್ ಕಳ್ಳಿ
ಬೇಲಿಯಲಿ
ಸಮೃದ್ಧ!

*********

ಮನುಷ್ಯ
ತಾನು ಮನುಷ್ಯನೆಂದು
ಗೊತ್ತಾಗುವತನಕ
ಚೆನ್ನಾಗಿಯೇ ಬದುಕಿದ್ದನಂತೆ!



**********

ಅವನು ಎಷ್ಟೋ ದಿನ
ಅಲ್ಲೇ ಕೂತು ಬರೆದಿದ್ದ,
ಗುಂಡಿ ತೋಡಿ
ಮಲಗಿರಲಿಲ್ಲ ಅಷ್ಟೇ!
ಆ ದೇಶದಲ್ಲೊಮ್ಮೆ
ಕಳವಾಗಿ
ಕೆಲವರು ಕದ್ದು
ಕೆಲವರು ಕಳಕೊಂಡು
ಕಳೆದಿದ್ದ ಕದ್ದು
ಕದ್ದಿದ್ದ ಕಳಕೊಂಡು
ಕಳುವೇ ರಾಜನೀತಿಯಾಗಿ
ಕಳಕೊಳ್ಳಲು ಏನೂ ಇರದ
ಕದಿಯದ ಭ್ರಷ್ಟರ
ಜೀವ ಕದಿಯಲು
ತೀರ್ಮಾನಿಸಲಾಯಿತು!!!

January 29, 2014

ಕೈಯಾರೆ ನೆಟ್ಟ
ಬಾಳೆಗಿಡಕ್ಕೆ ಬಿಟ್ಟ
ಕೊನೆಯಲ್ಲಿ
ಆತ್ಮ ಕಂಡಿತು.
ಪ್ರವಚನಗಳಲ್ಲಿ
ನನಗೆ ಆಸಕ್ತಿಯಿಲ್ಲ...
ಬದ್ಧತೆ
ಆಡಂಬರ
ಬೇರೆ ಬೇರೆ-
ಯೆಂದು ಬಾಯಿಬಿಟ್ಟು
ಹೇಳಲೇಬೇಕಾಗಿ
ಬಂದಿದೆ,
ಕಿವಿಗೆ ಬಿಡಲು
ಎಣ್ಣೆ ಕೊಡಿ!
ಹಳ್ಳಿಮನೆ
ತೋಟ ದನಕರು
ಮಾರಿ
ಪೇಟೆ ಸೇರಿದವರಿಂದ
ದೋಷ-
ಪರಿಹಾರಕ್ಕಾಗಿ
ಭರ್ಜರಿ 
ಶಾಂತಿ,ಕಥೆ!!!

January 27, 2014

ಎಣ್ಣೆ ಹಚ್ಚಿ
ಕ್ರಾಪು ಬಾಚಿ
ಬರಿಗಾಲಲ್ಲಿ ಬಸ್ಸು ಹತ್ತಿ
ಶಾಲೆಗೆ ಹೊರಟವನ
ಜಿಪ್ಪಿಲ್ಲದ ಬ್ಯಾಗಿನ ಮೇಲೆ
ಸ್ವರಚಿತ ಭಾರತ
ನಕಾಶೆ!

January 22, 2014

ಫೋಟೋ
ನೋಟುಗಳಲ್ಲಿ
ನಗುತ್ತ ಬಂಧಿಯಾದ
ಗಾಂಧಿಗೇ
ಸ್ವಾತಂತ್ರ್ಯವಿಲ್ಲ,
ಇನ್ನು ಕನಸುಗಳನ್ನು
ನೆನಪಿಸಬೇಡಿ!

January 17, 2014

ಬೆಂಕಿ ಮತ್ತು ಧರ್ಮ
ಸುಟ್ಟ ಮೇಲೇ
ಗೊತ್ತಾಗುವುದು
ಸುಡುತ್ತದೆಂದು.
ಗೊತ್ತಾಗ-
ದಿದ್ದರೆ ಕಾಣೋದಿಲ್ಲ
ನೀರಾವಿ!!!

January 15, 2014

ನಾನಿಲ್ಲಿ ಹೀಗೆ ಗೀಚುತ್ತಿರುವಾಗಲೇ
ಅಲ್ಲಿ
ಅವಳ ಕನಸು
ಅವನ ಸೆಮಿನಾರು
ಹಾರುವ ನೊಣ
ಕಾಣದ ಗಾಳಿ
ಉದುರುವ ಎಲೆ
ಬೀಸಿದ ಕಲ್ಲು
ತಪ್ಪುವ ಗುರಿ
ಒಡೆಯಲಿರುವ ಗಾಜು...
ಎಲ್ಲ ಹಾಗೇ ಇರುವಾಗ
ಹೇಳು
ಫಿಲಾಸಫಿ ಕ್ಲಾಸಿನಲ್ಲಿ
ನೀನು ಹೇಳಿದಂತಾಗಲು
ನನಗೆ ಹೇಗೆ ಸಾಧ್ಯ?!