November 27, 2012

ಎಲ್ಲ ಓಡುತ್ತಿರುವಾಗ
ಸುತ್ತ ಸುತ್ತುತ್ತಿರುವಾಗ
ಆ ಮರ,ಆ ಕಲ್ಲು
ಲೈಟು ಕಂಬ,ರೋಡು,ಮನೆ
ಶಾಲೆ,ಪುಸ್ತಕ,ಶಬ್ದ,ಅರ್ಥ...
ಹೀಗೇ ಕೆಲವು
ಇದ್ದಲ್ಲೇ ಇದ್ದಂತೇ ಉಳಿದುಬಿಟ್ಟಿರುವುದು
ಕ್ರೌರ್ಯ ಮತ್ತು ಸೌಂದರ್ಯ...

November 26, 2012

ಬಿನ್ನಹ


ತಲೆದಿಂಬಿನ ತುಂಬೆಲ್ಲ
ಕೆಂಗುಲಾಬಿ ಮುಳ್ಳು
ಬಚ್ಚಲಮನೆ ಹಾಡಿಗೆ
ಭಾವನೆಗಳ ತೆವಲು
ಶಬ್ದ ಮಾಡೋ ಎದೆಯೊಳಗೆ
ಮರಳು ಸಿಮೆಂಟು ಕಲ್ಲು
ಈಗಷ್ಟೆ ಹುಟ್ಟಿದ ಕವಿತೆಗೆ
ಸುರುಳಿ ಮುಂಗುರುಳಿನುರುಳು...
ಸಾಕು,
ಇನ್ನಾದರೂ ಬಿಟ್ಟುಬಿಡು!!

November 20, 2012

' ಕನ್ನಡ '

( ಸ್ಪರ್ಧೆಯೊಂದಕ್ಕಾಗಿ ಬರೆದ ಕವನ )

ಕನ್ನಡಿಯಲ್ಲಿ ಕನ್ನಡ
ತಿರುಗು ಮುರುಗಾಗಿ ಮರುಗುವ
ಡೊಂಕು ಗೆರೆಗಳ ಮೆರವಣಿಗೆ!

*********************

ಸಂಗ್ರಹಾಲಯದ ತುಂಬ
ಎಷ್ಟೊಂದು ಕನ್ನಡಿಗಳು..!

ಮುಚ್ಚೋ ಶಾಲೆ ಬಾಗಿಲಲ್ಲಿ
ಟ್ಯೂಷನ್ ಕ್ಲಾಸಿನ ಪಾಠದಲ್ಲಿ
ನೇತಾಡೋ ಪಟದ ಚೌಕಗಳಲ್ಲಿ
ಮುದ್ದೆ ರದ್ದಿ ಪೇಪರಿನಲ್ಲಿ
ರೈಲು ಟಿಕೇಟಿನ ಚೂರಿನಲ್ಲಿ
ಬಣ್ಣದ ಮೊಬೈಲು ಪರದೆಯಲ್ಲಿ
ಸ್ವಂತ ಅಪರಿಚಿತ ಸಾಹಿತ್ಯದಲ್ಲಿ
ಆಟೋ ರಿಕ್ಷಾಗಳ ಬೆನ್ನಿನಲ್ಲಿ
ಕೊಚ್ಚು-ಬಿಚ್ಚು ಗೀತೆಗಳಲ್ಲಿ
ಮಾಯಾನಗರಿಯ ಮಾಲುಗಳಲ್ಲಿ
ನವೆಂಬರ್ ತಿಂಗಳ ಗದ್ದಲದಲ್ಲಿ
ಚಾ-ತಿಂಡಿ ಸಭೆಗಳಲ್ಲಿ
ಉದ್ಘಾಟನೆ-ಸಮಾರೋಪ ಸಮ್ಮೇಳನಗಳಲ್ಲಿ
ಧಿಕ್ಕಾರ-ಜೈಕಾರ ಗಲಭೆಗಳಲ್ಲಿ
ಸಮೀತಿ-ಸಮೀಕ್ಷೆಗಳ ಅಡಿಗಲ್ಲಿನಲ್ಲಿ
ಹೊಸಪಕ್ಷಗಳ ಚಿಹ್ನೆಯಡಿಯಲ್ಲಿ
ಸವೆಯುತ್ತಲೇ ಇರುವ ಶಾಸನಗಳಲ್ಲಿ...

ಚಿತ್ರ ವಿಚಿತ್ರ ಕನ್ನಡಿಗಳು
ಪಕ್ಕದಲ್ಲೇ 'ಮುಟ್ಟಬಾರದು' ಬೋರ್ಡುಗಳು!

*************************

ಇನ್ನಾದರೂ ಹಲ್ಲುಜ್ಜಿ ಮುಖ ನೋಡಿಕೋ
ಸೊಟ್ಟಗೆ ಕಂಡರೆ
ನೀನು ಪಕ್ಕಾ ಕನ್ನಡಿಗ! 

November 17, 2012

ಓದೆಂದರೂ ಓದುವುದು ಬೋರು
ಕ್ಲಾಸಿಕ್ಸು,ನೋಟ್ಸು,ಕ್ರಿಟೀಕು
ಓದಿದರೆ ಓದಿದಂತಾಗಬೇಕು
ಲಂಕೇಶ್ ಪತ್ರಿಕೆಯ ಪೋಲಿ ಚುಟುಕು!

ಸಮಸ್ಯೆ

ಕತ್ತಲ ಗುರುತಿಸಲು
ಬೆಳಕು ಕಂಡಿರಬೇಕು,
ಕನಸು ಕಟ್ಟುವುದಕ್ಕೂ
ಕಾಣೆಯಾಗಿರಬೇಕು,
ಅತ್ತುಬಿಡುವುದಕ್ಕೂ
ಭಾವನೆಗಳು ಬೇಕು,
ಇಲ್ಲವಾಗುವುದಕ್ಕೂ
ಇದ್ದೆನೆಂಬುದು ಬೇಕು,
ಸರಿಯಾಗಿಲ್ಲ ಅನ್ನುವುದಕ್ಕೂ
ತಪ್ಪಾಗಿರುವುದು ಬೇಕು.
ಹೀಗೇ ಕಡೇಪಕ್ಷ
ಸುಮ್ಮನೇ ಗೀಚುವುದಕ್ಕೂ
ಏನೇನೋ ಬೇಕು!

ಅದೇ ಸಮಸ್ಯೆಯಾಗಿರುವುದು...

( ಸುರತ್ಕಲ್ ನಲ್ಲಿ ಅರ್ಧ ಗಂಟೆ ರೈಲು ನಿಂತಾಗ )

ರೈಲು ನಿಂತಿದೆ...
ಉರುಳೋ ಚಕ್ರ ಮುಷ್ಕರ ಹೂಡಿತೋ?
ಬಡಪಾಯಿ ಹಳಿಗೆ ದಾರಿ ತಪ್ಪಿತೋ?
ಕಾಲನ ಮೋಹಕೆ ಇಂಧನ ಸೋತಿತೋ?
ಚುಕುಬುಕು ಸೊಲ್ಲಿಗೆ ಜಗ ತೂಕಡಿಸಿತೋ?
ಕಟ್ಟಲಾಗಿದೆ,
ಏಕೋ ರೈಲು ನಿಂತಿದೆ...

November 16, 2012

ಮೂರು ತುಂಡುಗಳು

( ಅಕ್ಟೋಬರ್ ತಿಂಗಳ 'ಮಯೂರ'ದ 'ಕಲ್ಪನೆ-ಕಾವ್ಯ' ವಿಭಾಗದಲ್ಲಿನ ಈ ಚಿತ್ರಕ್ಕೆ ನನ್ನ ಪ್ರತಿಕ್ರಿಯೆ)

ಉಳ್ಳವರ ಮೈಮೇಲೆ ಮೆರೆವ
ಚಿನ್ನದ ತುಂಡುಗಳಲ್ಲ,
ಮೂರಾಬಟ್ಟೆ ಬದುಕಿನ
ಬೇರು ಭೂಮಿಗಿಳಿವಾಗಲೇ
ಕಿತ್ತು ಬೀದಿಗೆ ಬಿದ್ದ
ಪಿಂಡದ ತುಂಡುಗಳಿವು.

ಬೆನ್ನಿಗಂಟಿದ ಹೊಟ್ಟೆ ತುಂಬುವ
ಉಸಿರಿಗೆ ಯಾರ ಅನುಮತಿ?
ದಾರ ಹರಿದು ಹಾರುವ
ಪಟಕ್ಕೆ ಯಾವ ಎಲ್ಲೆ?
ಹಾವು ಏಣಿಯಾಟದ
ದಾಳಕ್ಕೆ ಯಾರ ಹಂಗು?
ನಡೆದದ್ದು ದಾರಿ,ಮಲಗಿದ್ದು ಮಂಚ
ಸವಿದದ್ದೇ ಸುಖ,ಕಂಡಿದ್ದೇ ಕನಸು!
ಕೋಗಿಲೆ,ವಸಂತ,ಚಿಗುರು
ಹೂವು,ಹಣ್ಣು,ಬೀಜ..?!
ಕ್ಷಮಿಸಿ,
ಆ ಶಬ್ದಗಳಿಲ್ಲಿ
ಚಲಾವಣೆಯಲ್ಲಿಲ್ಲ!

ಹೊಟ್ಟೆಕಿಚ್ಚಿನಿಂದ ದುರುಗುಟ್ಟದಿರಿ ಸ್ವಾಮೀ!
ನಿಮ್ಮ ಕಣ್ಣ ಬೆಂಕಿಯನ್ನೇ ಕುಡಿದು
ಕೊಡಲಿ-ಕೋಳ-ನೋಟಿನ ಸಹಿತ
ಚಟ್ಟ ಕಟ್ಟಿದ ಅಕ್ಷರಸ್ಥ ಲೋಕವ
ಸುಟ್ಟು ಮುರಿದು ತಿಂದಾವು
ಇವು
ಕೊಳ್ಳಿ ದೆವ್ವಗಳು!

November 5, 2012

ಸಿಕ್ಕಾಗಲೆಲ್ಲ ನಗೆಯ ಚೂರ
ಕಿಸೆಗೆ ತುರುಕಿ ಕಾನೆಯಾಗುವ
ಜನರ ಒಂಟಿತನದ ನಶೆಗಿಂತ,
  ಹನಿ ಹನಿಯಾಗಿ ಒಳಗಿಳಿದು
  ಕುರುಡಾಗಿಸಿ ಮರುಕ್ಷಣವೇ
  ವಿಸ್ಮಯದ ಮಿಂಚು ಹೊಳೆಯಿಸುವ
  ಅಕ್ಷರಗಳ ಚಮತ್ಕಾರಕ್ಕಿಂತ
    ವರ್ಷಕ್ಕೆರಡು ಬಾರಿ ಊರಿಗೆ ಹೋದಾಗ
    ಬೇಕೆಂದೇ ನನ್ನ ಹೊರಗಿನವನನ್ನಾಗಿಸುವ
    ತೋಟದ ಮರಗಳ ಹುಳಿಕೋಪ
    ವಿಚಿತ್ರವಾಗಿ ಆಕರ್ಷಿಸುತ್ತದೆ!
ಈ ಸಂಜೆ ಹೀಗೇ ಉಳಿದುಬಿಟ್ಟಿದ್ದರೆ
ಎಷ್ಟು ಸುಖವಾಗಿರುತ್ತಿತ್ತು!
ಮರಿಯೆಡೆಗೆ ಹಕ್ಕಿ,ತೀರದೆಡೆಗೆ ಅಲೆ
ಪ್ರೀತಿಯೆಡೆಗೆ ಜೀವ
ನಗುವಿನೆಡೆಗೆ ಬೆಚ್ಚಗಿನ ಸಂವೇದನೆ
ಬೆಳಕಿನೆಡೆಗೆ ಶುಭ್ರ ಕತ್ತಲು...
ಈ ಪ್ರಶಾಂತ ಪಯಣದ
ಅತೀತತೆಯನ್ನು ಮೀರುನಂಥದ್ದೇನಿದೆ
ಇಲ್ಲಿ?
ಇದು ಹೀಗೇ ಉಳಿದುಬಿಟ್ಟಿದ್ದರೆ
ಆಸೆ,ನೋವು,ಅಕ್ಷರಗಳ
ಗುರುತು ಮರೆಯುತ್ತಿತ್ತು!

ಉಪಾಯ-ದೌರ್ಬಲ್ಯ

ನಿಜ. ನಿನಗೆ
ನಿಷ್ಠನಾಗದಿರುವುದೇ ನನ್ನ
ಉಪಾಯ ಮತ್ತು
ದೌರ್ಬಲ್ಯ.

ಎಡವಿದ ಮೇಲೆ ಹಿಡಿದ ದಾರಿ
ಹುಡುಕುತ್ತಿದ್ದುದಲ್ಲವೆಂಬ ಸಂಶಯ
ದಾರಿ ತಪ್ಪಿದವ ಇಂಗ್ಲೀಷಿನಲ್ಲಿ
ದಾರಿ ಕೇಳಿದಾಗ
ಬಂದರೂ ಬಾರದಂತೆ
ಹೆಜ್ಜೆ ಹಾಕುವುದು ನನ್ನ
ಉಪಾಯ ಅಥವಾ
ದೌರ್ಬಲ್ಯ.

ನಕ್ಷತ್ರದಿಂದ ನಕ್ಷತ್ರಕ್ಕೆ
ಗೆರೆಯೆಳೆದು ರಂಗೋಲಿ ಹಾಕಿ
ಉಪಗ್ರಹ  ಸುತ್ತಾಡಿ
ಇಷ್ಟೆಂದರೆ ಇಷ್ಟೆಂದು
ನಕ್ಷತ್ರಿಕರೆಲ್ಲ ಬಡಕೊಂಡರೂ
ಬರಿಗೈಯಿಂದ ಗೆರೆ-
ಯೆಳೆದುಕೊಳ್ಳುವುದು ಅವರವರ
ಉಪಾಯ ಮತ್ತು
ದೌರ್ಬಲ್ಯ!

ತೊಟ್ಟಿ ತುಂಬಿ ತುಳುಕುವಾಗ
ನಾಯಿ ರಾಗ ತೆಗೆವ ಮುನ್ನ
ಎಂಜಲು ಕೈ ತೊಳೆಯದೇ
ಮೂಸಿ ಮೂಸಿ ಒಮ್ಮೆಯಾದರೂ
ರುಚಿ ನೋಡಿ ಬಡುಕಿಬಿಡುವುದು
ನಮ್ಮ ಉಪಾಯ,
ಅಲ್ಲ ದೌರ್ಬಲ್ಯ!!!

November 2, 2012

ಕವಿತೆ
ಬರೆಯಬೇಕು ಅಂದುಕೊಳ್ಳುವುದೇ
ಒಂದು ಚೆಂದದ
ಕವಿತೆ!
ಕಂಡಿದ್ದು ಕಾಣದ್ದು
ಅಂಟಿಸಿ ಕಿತ್ತು ಜೋಡಿಸಿ
ಕೊನೆಗೂ ಅದು 'ಕ್ಲಿಕ್' ಆಗುವುದು
ಏನೂ ಬರೆಯದೇ
ಉಳಿದುಬಿಡುವ ವ್ಯಂಗ್ಯದಲ್ಲೇ!!!