March 31, 2014

ಗಿಡ ಚಿಗುರುತ್ತದೆ
ಹಕ್ಕಿ ಹಾರುತ್ತದೆ
ನಿನ್ನೆಯಂತೆ,ನಾಳೆಯಂತೆ.
ಮತ್ಯಾರೋ
ಸಿಹಿ ತಿಂದು
ಆಚರಿಸಿ-ಕೊಂಡರಂತೆ!!!
ನೀನು
ನನ್ನ ಸೇರಿ
ನಾನು
ಬಾನ ಸೇರಿ
ಬಾನು
ನೆಲವ ಸೇರಿ
ಕೊನೆಯಲ್ಲಿ
ನಿನ್ನ ನನ್ನ ಬಾನ ನೆಲದ
ಇಚ್ಛಾಶಕ್ತಿ ಉಡುಗಿ
ಕತ್ತಲಾಯಿತು,
ಮುಚ್ಚಿದ ಕಣ್ಣು ತೆರೆಯಿತು!
ಒಂದು ಅಜ್ಞಾತ ಕವನದ
ಅಚ್ಚರಿಗೆ ಕಾದಷ್ಟು
ಬಹುಷಃ ನಿನಗಾಗಿಯೂ ಕಾದಿಲ್ಲ,
ಗೆಳತಿ
ಕ್ಷಮೆಯಿರಲಿ...

March 30, 2014

ಮೊದಲ ಸಾಲಿಗೆ
ಎರಡನೇ ಸಾಲು
ಹುಡುಕೋ ದಿನಗಳೇ ಚೆನ್ನಾಗಿತ್ತು,
ಕವಿತೆ
ಮುಗ್ಧವಾಗಿತ್ತು...

**************

ಖಾಲಿ ಸಮಯದ
ಗುರಿಯಿಲ್ಲದ ಅಲೆಮಾರಿ
ಕನ್ನಡೀಲಿ ಕಾಣೊಲ್ಲ
ಎಂಬುದೇ ಬೇಜಾರು...
ನನ್ನ ಕವನ
ಸುಂದರವಾಗಿ ಕಂಡರೆ
ಕ್ಷಮಿಸಿ,
ನಾನು ಕವಿಯಲ್ಲ!

************

ನಾನು ಬರೀಬೇಕು
ನೀನು ಓದಬೇಕು
ಅಷ್ಟೇ...
ನೀನು
ನಾನೇ ಆಗಿದ್ದರೂ ಚಿಂತೆಯಿಲ್ಲ!

************

ಯಂತ್ರವನ್ನು ತಯಾರಿಸುವುದಕ್ಕಿಂತ
ಅಪಾಯಕಾರಿ
ಸ್ವತಃ ಯಂತ್ರವಾಗುವುದು!

ಬ್ಯಾಂಕಿನಿಂದ...

ಎ.ಸಿ. ರೂಮಿನ ಬಾಗಿಲೆಳೆದು
ಧಿಡೀರ್ ಬಿಸಿಲಿಗೆ
ಧುಮುಕಿದಂತೆ
ಕವಿತೆ!!!

************

ಹಣೆಮೇಲೆ ಬರೆಯೋ ಬ್ರಹ್ಮ
ಬ್ಯಾಂಕ್ ಚಲನ್ನಿನ ಮೇಲೂ
ನಾಲ್ಕಂಕೆ ಗೀಚಿದ್ದರೆ
ನಾಕು ಜನರ ಹೊಟ್ಟೆ ತುಂಬುತ್ತಿತ್ತು!!!
ಕರ್ಟನ್ನಿನಂಥ
ನಿನ್ನ ನಗುವಿನ ಹಿಂದೆ
ಎಷ್ಟೊಂದು ಬಣ್ಣದ ಮುಖಗಳು,
ಎಷ್ಟೊಂದು ನಾಟಕಗಳು!

*   *   *   *   *

ಪಸರಿಸಿಹ ಕತ್ತಲ ಕುಡಿದು
ಮಾಯವಾಗಿಹೆ ನಾ ಕಪ್ಪಾಗಿ,
ಅರಿವಿನ ತಿಳಿಬೆಳಕ ಹೊತ್ತಿಸಲು
ಮೆಲ್ಲನೆ ಒಳ ಬಾ
ನೀ ಕನಸ ಕಿಡಿಯಾಗಿ!

March 16, 2014

ಸಿಗಲೇಬಾರದು ಶಬ್ದಕ್ಕೆ,
ಸಾಕು ಅರ್ಥ-
ಗಳ ಹೊಳಪು...

**************

ಆಕಾರದಿಂದ ಅರ್ಥಕ್ಕೆ
ಮಹತ್ವ ಯಾವಾಗ ಹೊರಳಿತೊ?
ಅಕ್ಷರಕ್ಕೂ ತಿಳಿಯಲಿಲ್ಲ...
ವರ್ಷವಿಡೀ ಬಚ್ಚಿಟ್ಟ ಬಣ್ಣ
ಬಂಡಾಯವೆದ್ದ ದಿನ
ಹೋಳಿ ಹುಣ್ಣಿಮೆ!

*************

ಕವಿತೆ
ಚಿಟ್ಟೆ
ತಾನೇ ಹಾರುತ್ತದೆ
ಬಿಟ್ಟುಬಿಡಿ...!
(ಅರ್ಧರಾತ್ರಿಯ ತಾತ್ಕಾಲಿಕ ಲಹರಿಯಿಂದ...!)

ಬರೆದೆಲ್ಲ ಸಾಲುಗಳು
ನಿನ್ನೊಳಗೇ ಅವಿತಂತೆ
ಅಕ್ಷರಗಳ ಕೋರಿಕೆಗೆ
ನಗುವೊಂದು ಹೊಳೆದಂತೆ
ಕ್ಷಣ ಕ್ಷಣವೂ ಹನಿಗೂಡಿ
ತೃಪ್ತ ತೊರೆ ಹರಿದಂತೆ
ಕಿರುಬೆರಳ ಅಪ್ಪುಗೆಗೆ
ಜಗವೆ ತಂಪಾದಂತೆ
ಕಲ್ಪನೆಯ ತೇವದಲಿ
ಸಿಕ್ಕಿಬಿಡು ಒಮ್ಮೆ,
ವಾಸ್ತವದ ಮೊಳಕೆಯಲಿ
ಉಸಿರಾಡುವೆ...
ಕೇಸರಿಗಳು ಬಂಡಾಯ ಕವನ
ತಪ್ಪಿಯೂ ಓದೋದಿಲ್ಲ,
ಅಕ್ಷರಗಳು ಮೊನಚು
ರಾಮನ ಬಾಣಕ್ಕಿಂತ!

**************

ಅಪ್ಪಿ ಮಲಗಿವೆ ಚಪ್ಪಲಿಗಳು
ದೇಗುಲದ ಹೊರಗೆ,
ಯಾರ್ಯಾರದರ ಜೊತೆ
ಯಾರ್ಯಾರದೋ!
ಅಕ್ೞರದ ಬೇರು
ನೆಟ್ಟವನೂ ಕಂಡಿಲ್ಲ!

*********

ನಗೋದು ಕೂಡ
ಅಪರಾಧ
ಎಲ್ಲ ಅಳುವಾಗ!

*********

ಅಸ್ತಿತ್ವಕ್ಕೆ ಚಪಲ
ಕವಿತೆಗೆ
ಹೊಟ್ಟೆಪಾಡು...

March 2, 2014

ಡೊಂಕು ಅಕ್ಷರಗಳ
ಅಸಂಗತತೆ ಕಂಡು
ಮರೆಯಲ್ಲಿ ನಗುತಿದೆ
ಬೀರನ ಹೆಬ್ಬೆಟ್ಟು!

*************

ಮನುಷ್ಯನನ್ನು
ಕೃತಕವಾಗಿಸಿದ್ದು
ವಿದ್ಯೆ!
ಶಾಲೆ ಚೆನ್ನಾಗಿಲ್ಲ
ರೋಡು ಸರಿಯಿಲ್ಲ
ಕರೆಂಟು ಸಾಕಾಗೊಲ್ಲ
ಸಿಲೆಂಡರು ಸಿಗೋದಿಲ್ಲ
ಷೇರಿನ ರೇಟು ಏರೋದಿಲ್ಲ
ದಿನಸಿ ದರ ಇಳಿಯೋದಿಲ್ಲ
ದೇಶ ಉದ್ಧಾರವಾಗೋದಿಲ್ಲ...
ಬೀಪಿ ಮಾತ್ರೆ ದಿನವೂ ನುಂಗಿದ
ದೊಳ್ಳು ಹೊಟ್ಟೆ ದುಡ್ಡಪ್ಪ,
ಬೀಡಿ ಎಳೆಯುತ ಹಲ್ಲುಗಿರಿದ
ದನ ಮೇಯಿಸೋ ಬೀರಪ್ಪ!