June 11, 2014

ನಿನ್ನ
ಹುಡುಕ ಹೊರಟಾಗ
ಅವಳು ಕಂಡು
ಕೆಲಸ ಕೆಟ್ಟಿತು!

(ಶೀರ್ಷಿಕೆ : ದೇವರಿಗೆ!!!)
ಅವನು ಕಾಣದಿರುವುದು
ನನ್ನದೇ ದೌರ್ಬಲ್ಯ
ಅಂದುಕೊಂಡರೂ
'ಸರ್ವಶಕ್ತ'ನೆನಿಸಿದವನನ್ನು
ಅನುಮಾನಿಸುವಷ್ಟು
ಶಕ್ತಿ ಉಳಿದಿದೆ!

(ಪ್ರೇರಣೆ : 'ಪ್ರವಾಹಣ',ವೋಲ್ಗಾ-ಗಂಗಾ)
ಭಕ್ತಿಗೆ ಕಾರಣವಾದವನು
ಭಯಕ್ಕೂ ಕಾರಣವಾಗಿಬಿಡುತ್ತಾನೆ
ಹೂ ಕೊಯ್ಯಿಸಿ ಮುಡಿದವನು
ಕಲ್ಲನ್ನೂ ಹೊಡೆಸಿಬಿಡುತ್ತಾನೆ
ಹುಟ್ಟಿಸಿ ಹುಲ್ಲು ಮೇಯಿಸುವವನು
ಬಂದೂಕನ್ನೂ ಕೈಗೆ ಕೊಟ್ಟುಬಿಡುತ್ತಾನೆ!
ಇಲ್ಲ,
ಇದೆಲ್ಲ ಅವನ ಇಚ್ಛಾನುಸಾರ
ನಡೆದಿರಲಿಕ್ಕಿಲ್ಲ...



ಆ ವಯಸ್ಸಿನಲ್ಲಿ ಹಾಗೆ ಮಾಡಿದ್ದು ತಪ್ಪೋ ಸರಿಯೋ ಹೇಳೋದು ಕಷ್ಟ..ಆದರೆ ಅದನ್ನು ಬರೆದುಕೊಳ್ಳೋ ಅವಶ್ಯಕತೆ ಇರಲಿಲ್ಲವೇನೋ...ಇನ್ನು ಅದನ್ನು Quote ಮಾಡೋದು,ಮಾಧ್ಯಮ ಪ್ರಚಾರ ಕೊಟ್ಟು ದೊಡ್ಡ ಸುದ್ದಿಯಾಗಿಸೋದು,ಯಾವಾಗಲೋ ಆಗಿದ್ದನ್ನು,ಬರೆದಿದ್ದನ್ನು ಈಗ ಚರ್ಚಿಸೋದು...ಇದು ದೊಡ್ಡ ದುರಂತ...

**********************************************************************************************************

".......ಮಾಡಿದ್ದಿದೆ" ಎಂಬ ಸಾಲು ಎಲ್ಲರ ಗಮನ ಸೆಳೆದು,ಆಕ್ರೋಶಕ್ಕೆ ಕಾರಣವಾಗಿ ವಿವಾದವಾಗಿಬಿಡುತ್ತದೆ. ಆದರೆ ಅದಕ್ಕಂಟಿಕೊಂಡೇ ಇರುವ ಸಾಲು ಯಾರ ಗಮನಕ್ಕೂ ಬರೋದಿಲ್ಲ(?????)
"ಭಯದಿಂದ ನಿದ್ದೆಗೆಟ್ಟ ಆ ದಿನದ ರಾತ್ರಿಗಳು ನೆನಪಾಗುತ್ತವೆ"
ಈ ಸಾಲನ್ನೂ ಸೇರಿಸಿ 'ಓದಿಕೊಂಡಿದ್ದರೆ' ಕನಿಷ್ಟ ಪಕ್ಷ ವಿವಾದದ ಪ್ರಖರತೆ ಕಡಿಮೆಯಿರುತ್ತಿತ್ತೇನೊ!!!
ವಿಷಯ ಇಷ್ಟೇ...ನಮಗೆ ಬೇಕಾದದ್ದು ವಿವಾದ,ಅದಕ್ಕಾಗಿ ನಾವು 'ಏನನ್ನು' ಬೇಕಾದರೂ ಕೆದಕಲು ತಯಾರ್!!!

URA ಅನುವಾದಿಸಿದ ಬ್ರೆಕ್ಟನ ಸಾಲು ನೆನಪಾಗುತ್ತಿದೆ...
'ನಿನ್ನ ಗೋರಿ ಮೇಲೆ
ಸತ್ತ ತಾರೀಖು
ಸತ್ತವನ ಹೆಸರು
ಅದಕ್ಕೊಂದು ಕಲ್ಲು
ಏನೂ ಬೇಡ
ಸತ್ತವನನ್ನೇ ಯಾರೆಂದು
ಪತ್ತೆ ಮಾಡಿ ಪೀಡಿಸಿಯಾರು;ಜೋಕೆ
ಇರಲೇ ಇಲ್ಲ ಎನ್ನುವ ಹಾಗೆ ಇದ್ದು ಬಿಡು.'


ನಾಲ್ಕಕ್ಷರ ಬರೆದು
ನಾಲ್ಕು ಮಾತಾಡಿದ
ಮರುಕ್ಷಣವೇ ಅವನನ್ನು
'ಆ ಪಂಥ'ಕ್ಕೆ
'ಈ ವಾದ'ಕ್ಕೆ
ಅಂಟಿಸುವವರ ಹಿರಿತನಕ್ಕೆ
ಈ ಕಿರಿಯನ ಧಿಕ್ಕಾರ!
(ಹುಂಬತನ/ಎಳಸುತನ ಅಂದುಕೊಳ್ಳಿ ಬೇಕಾದರೆ!)
ಕೇಸರಿ,ಹಸಿರು
ಸಂಸ್ಕೃತಿ,ಧರ್ಮ
ಮನುಷ್ಯನ ಸೃಷ್ಟಿಗಳು,
ಅವುಗಳನ್ನು ಆರಾಧಿಸುವುದೂ
ಮನುಷ್ಯ ಮಾತ್ರ!!!

June 7, 2014

ವರ್ಷಕ್ಕೊಮ್ಮೆ
'ವಿಶ್ವ ಪರಿಸರದಿನ',
ಈ ವರ್ಷದ್ದು ಈಗ
ಮುಗೀತು!
ಮರಳಿ ಕಾಡಿಗೆ ಹೋಗಿ
ಹಸಿ ಮಾಂಸ ತಿನ್ನೋಕಂತೂ
ಸಾಧ್ಯವಿಲ್ಲ;
ಆದರೆ
ಮನಸ್ಸು ಮಾಡಿದರೆ
ಅಜ್ಜ ಹಿಡಿದ
ನೇಗಿಲು ಹಿಡೀಬಹುದೇನೋ?!
ಅಥವಾ ಕನಿಷ್ಟ ಪಕ್ಷ
ಆ ರೀತಿ ಯೋಚಿಸಬಹುದೇನೋ?
ಕೃತಿ-ಕಾರ್ಯಕ್ಕಿಂತ ಮೊದಲು ಹುಟ್ಟಿದ್ದು
ಆಲೋಚನೆಯಂತೆ...

(ಕಾರಂತಜ್ಜನನ್ನು ಮತ್ತೊಮ್ಮೆ ಓದಬೇಕು...)
ಪ್ರಶ್ನಾತೀತವಾಗುವುದಕ್ಕಿಂತ
ಹೆಚ್ಚು ಅಪಾಯಕಾರಿಯಾದ್ದನ್ನು
ಇನ್ನೂ ಕಂಡಿಲ್ಲ!

**************************

ಬಿಗಿಯಾದ ನೆಲದಲ್ಲಿ
ಅಚ್ಚುಕಟ್ಟಾದ ಮನದಲ್ಲಿ
ಬೀಜ ಮೊಳೆಯೋದಿಲ್ಲ...

**************************

ವಾಸ್ತವದ ವಿಕಾರವನ್ನು
ರಮ್ಯತೆಯಿಂದ ಅಡಗಿಸಬಹುದು.
ಆದರೆ
ರುಚಿ???

**************************

ಕಲಿಕೆಯ ಶಿಖರ ಹತ್ತಿದಂತೆಲ್ಲ
ಜ್ನಾನಿಗಳಾಗುತ್ತಾರಂತೆ,
ಆದರೆ
ನಮಗೆ ಅದಕ್ಕೆ ಮೊದಲೇ
ನೌಕರಿ ಸಿಕ್ಕಿಬಿಟ್ಟಿರುತ್ತದೆ!!!
ಆ ವಾದ ಈ ವಾದಗಳ
ನೇಲ್ ಪಾಲಿಶ್ ವೀಕೆಂಡುಗಳ
ಜೀಡೀಪಿ ಏಬೀಸೀಡೀಗಳ
ಸತ್ಸಂಗ ಪ್ರಾಣಾಯಾಮಗಳ
ಪುಸ್ತಕಗಟ್ಟಲೇ ಕವಿತೆಗಳ
ಪರಿಚಯವೇ ಇಲ್ಲದ
ಬೀಜವೊಂದು
ಬ್ಯಾಂಕ್ ಸಾಲದ ಭಯದಲ್ಲಿ
ಕರೀ ಮೋಡದ ತಂಪಲ್ಲಿ
ಯಾರಿಗೂ ತಿಳಿಯದಂತೆ
ಬೆಳಕು ಹರಿವ ಮುನ್ನವೇ
ಉಸಿರಾಡಿತು...
'ನೌಕರಿ' 
'ಸಂಬಳ' 
'ಖರ್ಚು' 
'ಉಳಿತಾಯ' 
ಇವಿಷ್ಟು ಬಿಟ್ಟು ಉಳಿದದ್ದು 
ಬದುಕು!

May 27, 2014

ದೇಗುಲಗಳ ಸೌಮ್ಯ ಪ್ರತಿಮೆ
ಕವಿತೆಗಳ ಪ್ರಭಾವಶಾಲೀ ಪ್ರತಿಮೆ
ಆದರ್ಶಗಳ ಜೀವಂತ ಪ್ರತಿಮೆ
ಬುದ್ಧ
'ಪ್ರತಿಮೆ'.

ಆ ಕಾಲದಿಂದ ಇವತ್ತಿನವರೆಗೂ ಹುಚ್ಚು 'ಅಭಿವೃದ್ಧಿ' ನಡೆದು ಬಂದಿದ್ದು ಬಹುಷಃ ಹೀಗೆಯೇ...

"...ಈ ತಾಮ್ರ,ಈ ಹೊಲಗಳು-ಇವನ್ನು ಕಂಡರೆ ಸಾಕು.ನನ್ನೆದೆಯಲ್ಲಿ ಬೆಂಕಿಯೇ ಏಳುವುದು...
...ಬೇಗನೆ ಕೆಲಸ ಮಾಡಬೇಕೆಂಬ ಈ ಅವಸರವೇ ನಮ್ಮ ಕುಲಗೆಡಿಸಿತು...
...ಹೊಲವೆಂದರೇನು? ಜನರನ್ನು ಒಂದು ಕಡೆ ಕಟ್ಟಿಹಾಕುವ ಗೂಟವೇ ಅದು! ...ಮನುಷ್ಯ ಈ ತೆರನಾಗಿ,ಒಂದೇ ಕಡೆ ಕಟ್ಟಿಹಾಕಿದಂತೆ ನೆಲೆಸಿರಲು ಹುಟ್ಟಿದುದಲ್ಲ..."

...ಪುರುಹೂತನಿಗೆ ಮಾದ್ರ ವೃದ್ಧನ ಮಾತುಗಳು ಮನೋರಂಜಕವಾಗಿ ಕಂಡರೂ ಕೈಗೊಂಡ ಕೈದುಗಳನ್ನು ತ್ಯಜಿಸಿ ಈ ಜನಮಂಡಲದಲ್ಲಿ ಮಾನವ ಹಾಗೂ ಪಶು ಶತ್ರುಗಳ ನಡುವೆ ಬದುಕುವುದೇ ಅಸಾಧ್ಯವೆಂದು ತಿಳಿಯುತ್ತಿದ್ದ ಆತ...

...ಐವತ್ತು ವರ್ಷಗಳ ಮತ್ತಾದರೂ ವೃದ್ದನ ಮಾತು ಸತ್ಯವಾಯಿತು...

- ವೋಲ್ಗಾ ಗಂಗಾ
(ಪುರುಹೂತ,ಕಾಲ-ಕ್ರಿಸ್ತಪೂರ್ವ 2500)

May 22, 2014

ಇಲ್ಲಿ ಕತ್ತಲು
ಅಲ್ಲಿ ಕೂಡ,
ಬೆಳಕಿನ ಭ್ರೂಣಗಳು
ಗುಳೆ ಹೊರಟಿವೆ
ಅನಂತದತ್ತ,
ಆಯ್ಕೆಗಳಿಲ್ಲದೆ...

*********************

ಕತ್ತಲಿಗೆ ಕಣ್ಣಿಲ್ಲ,
ಆದರೆ
ಮೈತುಂಬಾ ಕಿವಿಗಳು!

*********************

ಅನಕ್ಷರಸ್ಥ ಕತ್ತಲ ಒಡಲಲ್ಲಿ
ಅಸಂಖ್ಯಾತ ಅಕ್ಷರಗಳು,
ಸಹಜವೆ...

May 20, 2014

ಇವರದ್ದು ಅತಿಯಾಯಿತು…

‘ಹಿಂದೂ ಮಹಾಸಾಗರಕ್ಕೆ ನೂಕಿಬಿಡಿ,ಈಜಿಕೊಂಡು ಕರಾಚಿ ತಲುಪಲಿ…’
’ಗಂಟು ಮೂಟೆ ಸಹಿತ ವಿಮಾನದಿಂದ ಕೆಳಗೆ ನೂಕಿ…’
’ಗುಜರಾತಿನಿಂದ ರೈಲಿನಲ್ಲಿ ಪಾರ್ಸೆಲ್ ಮಾಡಿ ಕಳಿಸಿ…’
ಹೀಗೇ ಇನ್ನೂ ಏನೇನೋ…
ಮೊನ್ನೆಯಿಂದ ಅನಂತಮೂರ್ತಿಯವರ ವಿಷಯದಲ್ಲಿ ಕೇಳಿಬರುತ್ತಿರುವ ವಿಕೃತ ಹೇಳಿಕೆಗಳಿಗೆ ಇತಿಮಿತಿಗಳೇ ಇಲ್ಲದಂತಾಗಿದೆ. ಮೊದಮೊದಲು ಇವೆಲ್ಲ ಅಪ್ರಬುದ್ಧ ಮನಸ್ಸುಗಳ silly ಪ್ರತಿಕ್ರಿಯೆಗಳಾಗಿ,ಗೆದ್ದ ಸಂಭ್ರಮದಲ್ಲಿ ಹೊರಬಂದ ಆವೇಶದ ಮಾತುಗಳಾಗಿ,ಸ್ವಲ್ಪ ಸಮಯದ ಬಳಿಕ ಆರಿಹೊಗುವ ತಾತ್ಕಾಲಿಕ ಕಿಡಿಗಳಾಗಿ ಕಂಡುಬಂದಿದ್ದವು. ಆದರೆ ದಿನ ಕಳೆದಂತೆ ಇಂಥ ಹೇಳಿಕೆಗಳು ಹೆಚ್ಚಾಗುತ್ತಿವೆ. ಚುನಾವಣೆಗಿಂತ ಮೊದಲು ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಹಲವರಿಗೆ ಈಗ ಬರೀ ಇದೇ ಕೆಲಸವಾಗಿಬಿಟ್ಟಿದೆ.
‘…ದೇಶ ಬಿಟ್ಟು ಹೋಗುತ್ತೇನೆ’ ಎಂಬ ಹೇಳಿಕೆಯನ್ನು ಮೊದಲ ಬಾರಿಗೆ ಕೇಳಿದಾಗ ನನಗೂ ಅದರಲ್ಲಿ ನಾಟಕೀಯತೆ ಕಂಡುಬಂದಿತ್ತು. (ಆದರೆ ಅದಾಗಲೇ ಆ ಹೇಳಿಕೆ ತಿರುಚಲ್ಪಟ್ಟಿತ್ತು ಎಂಬುದು ತಡವಾಗಿ ತಿಳಿದುಬಂದ ವಿಚಾರ) ಆ ನಂತರ ನಂದನ್ ನೀಲೇಕಣಿಯಂಥ ಕಾರ್ಪೋರೇಟ್ ದೈತ್ಯನಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದೂ ಇಷ್ಟವಾಗಿರಲಿಲ್ಲ. ಆದರೆ ನನ್ನ ಮಟ್ಟಿಗೆ ಇವೆಲ್ಲ ನಿರ್ಲಕ್ಷಿಸಬಲ್ಲ ವಿಚಾರಗಳಗಿದ್ದವು. ಏಕೆಂದರೆ ನಾವ್ಯಾವತ್ತೂ ಅನಂತಮೂರ್ತಿಯವರನ್ನು ಅಥವಾ ಇನ್ಯಾವುದೇ ಸಾಹಿತಿಯನ್ನು ನಮ್ಮ ಜೀವನದ ಪರಮೋಚ್ಛ ಆದರ್ಶವೆಂದು ತಿಳಿದುಕೊಂಡವರಲ್ಲ,ಹಾಗೆ ತಿಳಿದುಕೊಳ್ಳುವುದು ತಪ್ಪಾಗುತ್ತದೆ ಕೂಡ. ನಮಗಿಷ್ಟವಾಗದ ಅವರ ವಿಚಾರ,ನಡೆಗಳನ್ನು ಪ್ರಶ್ನಿಸುವ,ವಿರೋಧಿಸುವ ಹಕ್ಕು ಕೂಡ ನಮಗಿದೆ. ಆದರೆ ವಿರೋಧ ವಿಮರ್ಶಾತ್ಮಕವಾಗಿರಬೇಕೇ ಹೊರತು ವಿಕೃತವಾಗಿ ಅಲ್ಲ.
‘ಮೋದಿಯನ್ನು ತುಂಡು ತುಂಡು ಮಾಡುತ್ತೇನೆ’ ಎಂದವನಿಗೂ,’ಮೋದಿ ವಿರೋಧಿಗಳೆಲ್ಲರೂ ದೇಶ ಬಿಡಲಿ’ ಎಂದವನಿಗೂ,’ರೈಲಿನಲ್ಲಿ ಪಾರ್ಸೆಲ್ ಮಾಡಿ’,’ಸಮುದ್ರಕ್ಕೆ ನೂಕಿ’,’ವಿಮಾನದಿಂದ ನೂಕಿ’ ಎನ್ನುತ್ತಿರುವವರಿಗೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಭಯೋತ್ಪಾದಕತೆಯ ವಿರುದ್ಧ ಭಾಷಣ ಮಾಡುವವರು,ಮಂತ್ರಮುಗ್ಧರಾಗಿ ಕೇಳುವವರು ಅನಂತಮೂರ್ತಿಯವರ ವಿಷಯದಲ್ಲಿ ಮಾಡುತ್ತಿರುವುದೇನು? ಕಾಲ ಕಾಲಕ್ಕೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತ,ಜೀವನ ಪ್ರೀತಿಯನ್ನೇ ಉಸಿರಾಡುತ್ತಿರುವ ವೃದ್ಧ ಜೀವವೊಂದಕ್ಕೆ ಸುಳ್ಳು ಕರೆ ಮಾಡಿ ‘ನಿಮಗಾಗಿ ಟಿಕೆಟ್ ಬುಕ್ ಮಾಡಿದ್ದೇವೆ’ ಎನ್ನುವುದನ್ನು ಭಯೋತ್ಪಾದಕತೆ ಅನ್ನದೆ ಮತ್ತೇನೆಂದು ಕರೆಯಬೇಕು? ಇಷ್ಟಕ್ಕೂ ಅನಂತಮೂರ್ತಿಯವರು ಯಾರಮೇಲಾದರೂ ಹಲ್ಲೆ ಮಾಡಿದ್ದಾರಾ ಅಥವಾ ಯಾರದ್ದಾದರೂ ತಲೆ ತೆಗೆಯುತ್ತೇನೆ ಅಂದಿದ್ದಾರಾ???
ಸಾಹಿತ್ಯ,ಸಾಹಿತಿಗಳು ನಿಮ್ಮ ಧಾರ್ಮಿಕ ಭಾವನೆಗಳಿಗೆ,ನಂಬಿಕೆಗಳಿಗೆ ಧಕ್ಕೆ ತಂದಿದ್ದರೆ ಅದನ್ನು ಅಕ್ಷರಗಳ ಮೂಲಕವೇ ಹೊರಹಾಕಿ ಅಥವಾ ಸಾಹಿತ್ಯದ ವಿಷಯದಲ್ಲಿ ನೀವೂ ನಾಸ್ತಿಕರಾಗಿ. ಇವೆರಡನ್ನೂ ಮಾಡಲು ಸಾಧ್ಯವಿಲ್ಲವಾಗದೆ ಹಿಂಸಾತ್ಮಕ ಮಾರ್ಗ ಅನುಸರಿಸುವುದು ದೌರ್ಬಲ್ಯವೆನಿಸುತ್ತದೆ. ತಾಳ್ಮೆಯೇ ಇಲ್ಲದವನ ‘ಧರ್ಮ’ದ ಬಗ್ಗೆಯೂ ಪ್ರಶ್ನೆಗಳು ಉದ್ಭವವಾಗುತ್ತವೆ…
ಈ ಸಂದರ್ಭದಲ್ಲೇ ಮತ್ತೆ ಮತ್ತೆ ಕೇಳಿಬಂದ ಮಾತು ‘ಸಾಹಿತಿಯೊಬ್ಬನಿಗೆ ಇದೆಲ್ಲ ಬೇಕಿತ್ತಾ? ಮಾಡಿದ ‘ತಪ್ಪಿಗೆ’ ಸರಿಯಾದ ಶಾಸ್ತಿ ಅನುಭವಿಸಲಿ’! ಇದೇನು ಕನಿಕರವೋ? ಖಾಳಜಿಯೋ? ಸಿಟ್ಟೋ? ಅಪಹಾಸ್ಯವೋ? ಅರ್ಥವಾಗುತ್ತಿಲ್ಲ. ಸಾಹಿತ್ಯವನ್ನು ನಿಜಕ್ಕೂ ಇಷ್ಟಪಡುವವನು ಇರಬೇಕಾದ್ದು ಮಾನವೀಯತೆಯ ಪರವಾಗಿ. ಇಲ್ಲಿ ವ್ಯಕ್ತಿಗಿಂತ ಮೌಲ್ಯ ಮುಖ್ಯವಾಗುತ್ತದೆ. ಅದು ಅನಂತಮೂರ್ತಿಯೇ ಆಗಿರಲಿ ಅಥವಾ ಮೋದಿಯೇ ಆಗಿರಲಿ. No one has got rights speak about someone’s death. ಸಾಹಿತಿಯೇನು ದೇವಲೋಕದಿಂದ ಉದುರಿ ಬಿದ್ದವನಲ್ಲ. ಎಲ್ಲರಂತೆ ಅವನೂ ಒಬ್ಬ ಮನುಷ್ಯ ಅಷ್ಟೆ. ಅವನಿಗೂ ಹೆಂಡತಿ ಮಕ್ಕಳಿದ್ದಾರೆ,ಅವನೂ ಎಲ್ಲರಂತೆಯೇ ಊಟ ತಿಂಡಿ ಮಾಡುತ್ತಾನೆ. ಆತ ರಾಜಕೀಯ ಪ್ರವೇಶಿಸಬಾರದು,ರಾಜಕೀಯ ಸನ್ನಿವೇಷಗಳಿಗೆ ಪ್ರತಿಕ್ರಿಯೆ ನೀಡಬಾರದು,ನಾಲ್ಕು ಗೋಡೆ ಮಧ್ಯೆ,ಪುಸ್ತಕದ ಪುಟಗಳ ಮಧ್ಯೆ ಕಥೆ ಕವನಕ್ಕೆ ಸೀಮಿತವಾಗಿರಬೇಕು ಎಂದು ಸಂವಿಧಾನದ ಅಥವಾ ಧರ್ಮಗ್ರಂಥದ ಯಾವ ಭಾಗದಲ್ಲಿ ಬರೆದುಕೊಂಡಿದೆ ಅಥವಾ ಆತನ ಈ ಕಾರ್ಯ ಯಾವ ರೀತಿಯಿಂದ ಮನುಷ್ಯ ಸಹಜ ಗುಣಗಳಿಗೆ ವಿರುಧ್ಧವಾಗಿದೆ? ಇಷ್ಟಕ್ಕೂ ಯಾರೂ ಬುಧ್ಧಿಜೀವಿ,ಸಾಹಿತಿ ಎಂದು ತನ್ನನ್ನು ತಾನೇ ಕರೆದುಕೊಳ್ಳೋದಿಲ್ಲ. ಅದೆಲ್ಲ ಅವರ ಕೃತಿ,ಕಾರ್ಯವನ್ನು ನೋಡಿ ಇತರರು ಆರೋಪಿಸುವುದು ಅಷ್ಟೇ. ರಸ್ತೆ ಅಗಲೀಕರಣಕ್ಕೆಂದು ಮರಗಳನ್ನು ನೆಲಸಮ ಮಾಡುವಾಗ,ಯಾವುದೋ ವಿದೇಶೀ ಕಂಪನಿ ಸ್ಥಾಪನೆಗೆ,ವಿದ್ಯುತ್ ಸ್ಠಾವರಕ್ಕೆಂದು ಕೃಷಿ ಭೂಮಿಯನ್ನು,ಅರಣ್ಯ ಪ್ರದೇಶವನ್ನು ಬಳಸಿಕೊಳ್ಳುವಾಗ,ಗಣಿಗಾರಿಕೆ ಮಿತಿ ಮೀರಿದಾಗ,ಭಾಷಾ ಮಾಧ್ಯಮದ ಬಗ್ಗೆ ಹೋರಾಟಗಳು ನಡೆಯುವಾಗ ಮಡಿವಂತರೆಲ್ಲರೂ ಜಾಣ ಮೌನ ತಳೆದಾಗ ಮಾತಾಡಿದವರೇ ಈ ಸಾಹಿತಿಗಳು,ಬುದ್ಧಿಜೀವಿಗಳು ಎಂಬ ವಿಚಾರ ಎಷ್ಟೋ ಜನರಿಗೆ ಮರೆತೇ ಹೋದಂತಿದೆ. ‘ಈ ಮೊದಲು ಅವರ ಬಗ್ಗೆ ಗೌರವವಿತ್ತು ಆದರೆ ಅವರ ರಾಜಕೀಯದಿಂದಾಗಿ ಇದ್ದ ಗೌರವವೂ ಹೋಯಿತು’ ಅನ್ನುವವರ ಬಳಿ ಅನಂತಮೂರ್ತಿಯವರು ತನ್ನನ್ನು ಗೌರವಿಸಿ ಎಂದು ಯಾವತ್ತೂ ಕೇಳಿಕೊಂಡಿರಲಿಲ್ಲ ಮತ್ತು ಅವರು ಇಂಥ ವಿಕೃತಿಯನ್ನೂ ಅಪೇಕ್ಷಿಸಿರಲಿಲ್ಲ. ಬರೀ ‘ಮಾಮರ,ಕೋಗಿಲೆ’ಗೆ ಸೀಮಿತವಾಗುವವರು ಮಾತ್ರ ಸಾಹಿತಿಗಳು ಎನ್ನುವುದಾದರೆ ಕ್ಷಮಿಸಿ… ದೇವನೂರು,ಲಂಕೇಶ್,ಕಾರಂತರು,ಅನಂತಮೂರ್ತಿ,ತೇಜಸ್ವಿ ಇವರೆಲ್ಲ ಯಾವತ್ತೂ ಸಾಹಿತಿಗಳೇ ಆಗಿರಲಿಲ್ಲ! ಅವರ ಹೋರಾಟ,ನಿಷ್ಠುರತೆ,ಮಾನವೀಯತೆ,ನೇರ ನುಡಿಯನ್ನು ಹೊರತುಪಡಿಸಿ ಮತ್ಯಾವ ಕಾರಣಕ್ಕಾಗಿ ನೀವು ಅವರನ್ನು ‘ಈ ಮೊದಲು’ ಗೌರವಿಸುತ್ತಿದ್ದಿರೋ ಅರ್ಥವಾಗುವುದಿಲ್ಲ! ನಿಮಗೆ ಇಷ್ಟವಾಗುತ್ತಾರೋ ಇಲ್ಲವೋ ಆದರೆ ಅವರು ಯಾವತ್ತೂ ಇದ್ದಿದ್ದೇ ಹಾಗೆ…
ಸಾಹಿತ್ಯವನ್ನು ಓದಿಕೊಂಡವರಿಗೆ,ಮುಂದೆಯೂ ಓದುವವರಿಗೆ ಇದೆಲ್ಲ ಈ ಕ್ಷಣಕ್ಕೆ ಅಲ್ಲದಿದ್ದರೂ ಮುಂದೊಂದು ದಿನ ಅರ್ಥವಾಗಬಹುದು,ಆದರೆ ‘ಕುರಿತೋದದ ಪಂಡಿತ’ರಿಗೆ,ತಲೆ ತೆಗೆಯುವ ‘ಕ್ರಾಂತಿಕಾರಿ’ಗಳಿಗೆ ಇಂಥ ಸೂಕ್ಷ್ಮಗಳನ್ನು ಅರ್ಥ ಮಾಡಿಸುವುದು ಯಾರು? ಮತ್ತು ಹೇಗೆ? ಕಡಲು ತನ್ನ ಪಾಡಿಗೆ ತಾನು ಭೋರ್ಗರೆದುಕೊಂಡರೆ ಅದರಿಂದ ಯಾರಿಗೂ ಸಮಸ್ಯೆಯಿಲ್ಲ,ಆದರೆ ಸುನಾಮಿಯನ್ನು ಮತ್ತೊಮ್ಮೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ…ಇದು ಸಧ್ಯದ ಆತಂಕ…
ಇವತ್ತು ಆರತಿ ಮಾಡಿಸಿಕೊಂಡ ಗಂಗೆ
ನಾಳೆ ಮತ್ತೆ ಹೆಣಗಳನ್ನು ಹೊರುತ್ತಾಳೆ
ಕಾರ್ಖಾನೆಗಳ ಕೊಳಕು ತೊಳೆಯುತ್ತಾಳೆ
ದಿನ ಕಳೆದಂತೆ ಹೆಚ್ಚು ಮಲಿನವಾಗುತ್ತಾಳೆ
ಸಹಜತೆಯಿಂದ ದೂರವಾಗುತ್ತಾಳೆ...
ಎಂದಿನಂತೆ...

ಆ ತಾಳ್ಮೆಗೆ ಶರಣು...

(ನಮ್ಮ 
ಅಘನಾಶಿನಿ,ಶರಾವತಿಯರೇ
ಪುಣ್ಯವಂತೆಯರು...)

May 14, 2014

ಒಬ್ಬ ಕಟ್ಟಿದನೆಂದು ಇಬ್ಬರು
ಇಬ್ಬರ ಕಂಡು ಹಲವರು
ಕಟ್ಟೇ ಕಟ್ಟಿದರು...
ಶೌಚಕ್ಕೂ ಜಾಗವಿಲ್ಲ,
ದೇವಸ್ಥಾನಗಳ ಊರಲ್ಲೀಗ
ಗಬ್ಬುನಾತ!
ಈಗಲೂ ಕವನದಲ್ಲಿ
ಕೋಗಿಲೆ ಕೂಗಿದರೆ
ಹಸಿರು ಕಂಗೊಳಿಸಿದರೆ
ಪ್ರೀತಿ ಉಕ್ಕಿದರೆ
ಜಾತ್ಯತೀತತೆ ತಂಪೆರೆದರೆ
ಸಿರಿಗನ್ನಡ ಗೆದ್ದಂತೆ ಕಂಡುಬಂದರೆ
ದಯವಿಟ್ಟು ತಿಳಿಸಿ,
ಬೆಂಕಿಪೊಟ್ಟಣ
ಕಿಸೆಯಲ್ಲೇ ಇದೆ!
ಕನ್ನಡಿಗೆ
ಫ್ರೇಮು ಕಟ್ಟುವವನನ್ನು
ಭೇಟಿಯಾಗಬೇಕಿತ್ತು...
ಕಲ್ಪನೆ-ವಾಸ್ತವ
ಎರಡನ್ನೂ ಸುಳ್ಳಾಗಿಸಬಲ್ಲವನು
ಅವನು...!
ಕಾವ್ಯ
ಬರೀ ಕಲೆಯಲ್ಲ,
ತೆವಲು ಕೂಡ
ಅಂತ
ಅನು-
ಮಾನ!
ಗುರಿ ಯಾವತ್ತೂ
ಹಿಂದಿರುತ್ತದೆ,
ಮುಂದೆ ಕಂಡಿದ್ದು
ಬಿಂಬ ಮಾತ್ರ...


April 19, 2014

ನೀವು
ಬಾಗಿಸಿದಾಗಲೇ ಗೊತ್ತಾಗಿದ್ದು
ನಾನು ಅಷ್ಟೆಲ್ಲಾ
ಬಾಗಬಲ್ಲೆನೆಂದು.
ಕೇಳಿ,
ನನಗೆ ಸಾವಿನ ಬಗ್ಗೆಯೂ
ಕುತೂಹಲವಿದೆ!

April 16, 2014

ಹಿಂದೆ ತಿರುಗಿದ ಕೃಷ್ಣ
ಹೊರಗೆ ಬರಲಿಲ್ಲ,
ಕನಕನ ಕಂಡು
ಬಾಗಿಲು ಮುಚ್ಚಿತ್ತು!
'ನೂರು ದೇವರನೆಲ್ಲಾ ನೂಕಾಚೆ ದೂರ...'
'ಕುಲ ಕುಲ ಕುಲವೆಂದು ಹೊದೆದಾದದಿರಿ...'
'...ಸರ್ವ ಜನಾಂಗದ ಶಾಂತಿಯ ತೋಟ...'
. . . 
ರಾಗವಾಗಿ ಹಾಡೋಕೆ ಎಲ್ಲ ಹಾಡುಗಳೂ ಇಂಪಾಗಿಯೇ ಇರುತ್ತವೆ;ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ,ಅಂಬೇಡ್ಕರ್ ಜಯಂತಿ,ಗಾಂಧಿ ಜಯಂತಿಯ ಭಾಷಣಗಳೂ ಸ್ಪೂರ್ತಿದಾಯಕವಗಿರುತ್ತವೆ;ಇನ್ನು ನಮ್ಮ ಜಗದ್ಗುರುಗಳ,ಧರ್ಮ ಸಂಸ್ಥಾಪಕರ,ದೇಶವನ್ನು ಜಾಗೃತವಾಗಿಡುವವರ ಪ್ರವಚನಗಳಂತೂ ಪ್ರಶ್ನೆಗಳಿಗೆ ನಿಲುಕದ್ದು!
ಹೀಗೆ ಎಲ್ಲ ಇಂಪಾಗಿ,ಧನಾತ್ಮಕವಾಗಿ,ಆರೋಗ್ಯಕರವಾಗಿಯೇ ಇದೆ,ವಾಸ್ತವವೊಂದನ್ನು ಹೊರತುಪಡಿಸಿ!

ನಮ್ಮನೆ ತೋಟದಲ್ಲಿ ನಮಗಿಂತ ಹೆಚ್ಚು ಕಾಲ ಕಳೆಯೋ ಗಿಡ್ಡನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮಾತಾಡುವಂತಿಲ್ಲ,ಮನೆಯೊಳಗೆ ಊಟ ಬಡಿಸುವಂತಿಲ್ಲ,ಅವನ ಮನೆಯೊಳಗೆ ಹೋಗುವಂತಿಲ್ಲ...ಎಲ್ಲಕ್ಕಿಂತ ಮುಖ್ಯವಾಗಿ ಇಂಥದ್ದನ್ನೆಲ್ಲ ಪ್ರಶ್ನಿಸುವಂತಿಲ್ಲ,ಈ ರೀತಿ ಯೋಚಿಸುವಂತಿಲ್ಲ...ಬರೀ ನಿಶೇಧಗಳೇ!

ಭಾರತದ ಭಾವೀ ಸರ್ಕಾರವೆಂದೇ ಕರೆಯಲ್ಪಡುವ ಮೋದಿ ಸರ್ಕಾರದ ಪರಮೋಚ್ಚ ಗುರಿಗಳಲ್ಲೊಂದು ದೇವಸ್ಥಾನ ಕಟ್ಟುವುದು! ಎಂಥ ದೇವಸ್ಥಾನ? ಕೆಲವರು ಮಾತ್ರ ಪ್ರವೇಶಿಸಬಹುದಾದ,ಕೂತು ಊಟ ಮಾಡಬಹುದಾದ ದೇವಸ್ಥಾನ! ಚಪ್ಪಲಿಯಿಂದ ಕೂದಲಿಗೆ ಹಚ್ಚೋ ಬಣ್ಣದವರೆಗೆ ಆಧುನಿಕರಾಗಿರೋ ನಮಗೆ ದೇವಸ್ಥಾನಗಳು ಮಾತ್ರ ಆಧುನಿಕವಾಗಿರಬಾರದು. 'ಪುರುಷರಿಗೆ' 'ಸ್ತ್ರೀಯರಿಗೆ' ಎಂದು ಶೌಚಾಲಯಗಳ ಹೊರಗೆ ಬೋರ್ಡು ಹಾಕಿದಂತೆ 'ಇಂಥ ಜಾತಿಯವರಿಗೆ' ಎಂದು ದೇವಸ್ಥಾನಗಳ ಹೊರಗೆ ಬರೆಯೋದೊಂದು ಬಾಕಿಯಿದೆ!

ಧರ್ಮ,ಜಾತಿ,ಬಣ್ಣ,ಲಿಂಗ....ಅಸಮಾನತೆ ನಮಗೆ ಹೊಸತಲ್ಲ,ಆದರೆ ಇನ್ನೂ ಹಳತಾಗಿಲ್ಲ...'ತಿಳಿದವರ' ತಿಳಿಗೇಡಿತನ ಖಂಡಿತ ದುರಂತವಲ್ಲ,ಅದಕ್ಕಿಂತಲೂ ಅಪಾಯಕಾರಿಯಾದದ್ದು....

April 15, 2014

ಅಪಾಯ
ಅಭಿವೃದ್ಧಿ
ಎರಡರಲ್ಲೂ ಉರಿಯುತ್ತದೆ
ಕೆಂಪುದೀಪ!

*************

ಮೊಬೈಲ್ ಟವರಿನಡಿ
ಮೊಳೆತ ಬೀಜದ್ದೂ
ಒಂದು
ಬದುಕಂತೆ!
ಕಿಸೆಯಲ್ಲೇ ಇರುತ್ತದೆ
ಶೂನ್ಯ,
ಯಾವಾಗೆಂದರೆ ಆವಾಗ
ಕವಿತೆಯಾಗೋಕೆ
ಹೀಗೆ...!
ಜೀವನದ ಅತಿ ದೊಡ್ಡ 
ಅನರ್ಥ
ಶಿಕ್ಷಣ!!!
ಮೈಕಲ್ಲಿ ಜೋರು
ಪ್ರಚಾರ ನಡೀವಾಗ
ಬಿಳೀ ನಾಯಿಗೆ ಜೋರು
ನಿದ್ದೆ,
ನನಗೆ
ಅಸೂಯೆ!!!

**************

ನಮ್ಮ ಮಧ್ಯೆಯೇ ಅಮೂರ್ತವಾಗಿದ್ದ
ಅಸಮಾನತೆಗೆ,ವಿಕೃತಿಗೆ
ಅಜಾಗರೂಕತೆಗೆ
ಅಧಿಕಾರಶಾಹಿಗೆ
ಕೊಳಕು ನಾಗರಿಕತೆಗೆ
ಮೂರ್ತ ರೂಪ ಕೊಟ್ಟ
'ಮೋದಿ'
ಎಂಬ ಮನಸ್ಥಿತಿಗೆ
ಧನ್ಯವಾದ ಮತ್ತು ಧಿಕ್ಕಾರ...
ಎಲ್ಲವೂ ಆಗಬಲ್ಲ
ಅನ್ನದೆದುರು
ಅನ್ನವಾಗಲಾರದ ಅಕ್ಷರ
ಕುಬ್ಜವಾಗಿ ಕಾಣುತ್ತದೆ...
ನನ್ನೊಡನೆ
ಕವಿತೆಯ ದಿಕ್ಕನ್ನೂ
ಬದಲಾಯಿಸಬಲ್ಲ ಕಣ್ಣುಗಳಲ್ಲಿ 
ನಿಜಕ್ಕೂ ಏನೂ ಇಲ್ಲ
ಆದರೂ....!

April 8, 2014

ಇದೆ ಇದೆ ಇದೆ 
ಎಂದು ಹತ್ತಿ
ಕಂಡ ಬೋಳು ಗುಡ್ಡೆಯಲ್ಲಿ 
ಸುಡೋಕೆ ಬೆಂಕಿಯಿಲ್ಲ 
ಅಗೆಯೋಕೆ ಮಣ್ಣಿಲ್ಲ,
ಕನಿಷ್ಟ ಒಂದು
ಹದ್ದಾದರೂ ಹಾರಬಾರದೆ?!!!
ತನ್ನನ್ನು ತಾನೇ
ಕಾಪಿ ಮಾಡುವ
ಖಾಲಿ ದಿನಗಳಿಗೆ
ಸ್ವಾಭಿಮಾನವಿಲ್ಲ!

******************

ಅದೇ ಹಾದಿಯ
ಅದೇ ತಿರುವಲ್ಲಿ
ಅದೇ ಕವಿತೆ...
ಮತ್ತೆ?
ಮತ್ತದೇ 
ಕವಿತೆ!

April 5, 2014

Birth
Is negligible,
But not
Growth!
ಹುಟ್ಟಿ
ಬೆಳೆದು
ಸಾಯೋದು ಕೂಡ
ಕೃತಕವಾಗಿದ್ದು
ಅರಿವಿಗೆ ಬಾರದ
ದುರಂತ!

**********

ಗಾಳಿ,ನೀರು,ಬೆಳಕು
ಚಲಿಸುವಾಗ
ನನ್ನ ನಿಶ್ಚಲತೆಯ
ಅರ್ಥ ತಿಳಿಯಿಲಿಲ್ಲ.
ಅಪಾಯಕಾರಿ ಧರ್ಮಕ್ಕಿಂತ
ನಿರುಪದ್ರವಿ ನಾಸ್ತಿಕತೆ
ಶ್ರೇಷ್ಠ!

March 31, 2014

ಗಿಡ ಚಿಗುರುತ್ತದೆ
ಹಕ್ಕಿ ಹಾರುತ್ತದೆ
ನಿನ್ನೆಯಂತೆ,ನಾಳೆಯಂತೆ.
ಮತ್ಯಾರೋ
ಸಿಹಿ ತಿಂದು
ಆಚರಿಸಿ-ಕೊಂಡರಂತೆ!!!
ನೀನು
ನನ್ನ ಸೇರಿ
ನಾನು
ಬಾನ ಸೇರಿ
ಬಾನು
ನೆಲವ ಸೇರಿ
ಕೊನೆಯಲ್ಲಿ
ನಿನ್ನ ನನ್ನ ಬಾನ ನೆಲದ
ಇಚ್ಛಾಶಕ್ತಿ ಉಡುಗಿ
ಕತ್ತಲಾಯಿತು,
ಮುಚ್ಚಿದ ಕಣ್ಣು ತೆರೆಯಿತು!
ಒಂದು ಅಜ್ಞಾತ ಕವನದ
ಅಚ್ಚರಿಗೆ ಕಾದಷ್ಟು
ಬಹುಷಃ ನಿನಗಾಗಿಯೂ ಕಾದಿಲ್ಲ,
ಗೆಳತಿ
ಕ್ಷಮೆಯಿರಲಿ...

March 30, 2014

ಮೊದಲ ಸಾಲಿಗೆ
ಎರಡನೇ ಸಾಲು
ಹುಡುಕೋ ದಿನಗಳೇ ಚೆನ್ನಾಗಿತ್ತು,
ಕವಿತೆ
ಮುಗ್ಧವಾಗಿತ್ತು...

**************

ಖಾಲಿ ಸಮಯದ
ಗುರಿಯಿಲ್ಲದ ಅಲೆಮಾರಿ
ಕನ್ನಡೀಲಿ ಕಾಣೊಲ್ಲ
ಎಂಬುದೇ ಬೇಜಾರು...
ನನ್ನ ಕವನ
ಸುಂದರವಾಗಿ ಕಂಡರೆ
ಕ್ಷಮಿಸಿ,
ನಾನು ಕವಿಯಲ್ಲ!

************

ನಾನು ಬರೀಬೇಕು
ನೀನು ಓದಬೇಕು
ಅಷ್ಟೇ...
ನೀನು
ನಾನೇ ಆಗಿದ್ದರೂ ಚಿಂತೆಯಿಲ್ಲ!

************

ಯಂತ್ರವನ್ನು ತಯಾರಿಸುವುದಕ್ಕಿಂತ
ಅಪಾಯಕಾರಿ
ಸ್ವತಃ ಯಂತ್ರವಾಗುವುದು!

ಬ್ಯಾಂಕಿನಿಂದ...

ಎ.ಸಿ. ರೂಮಿನ ಬಾಗಿಲೆಳೆದು
ಧಿಡೀರ್ ಬಿಸಿಲಿಗೆ
ಧುಮುಕಿದಂತೆ
ಕವಿತೆ!!!

************

ಹಣೆಮೇಲೆ ಬರೆಯೋ ಬ್ರಹ್ಮ
ಬ್ಯಾಂಕ್ ಚಲನ್ನಿನ ಮೇಲೂ
ನಾಲ್ಕಂಕೆ ಗೀಚಿದ್ದರೆ
ನಾಕು ಜನರ ಹೊಟ್ಟೆ ತುಂಬುತ್ತಿತ್ತು!!!
ಕರ್ಟನ್ನಿನಂಥ
ನಿನ್ನ ನಗುವಿನ ಹಿಂದೆ
ಎಷ್ಟೊಂದು ಬಣ್ಣದ ಮುಖಗಳು,
ಎಷ್ಟೊಂದು ನಾಟಕಗಳು!

*   *   *   *   *

ಪಸರಿಸಿಹ ಕತ್ತಲ ಕುಡಿದು
ಮಾಯವಾಗಿಹೆ ನಾ ಕಪ್ಪಾಗಿ,
ಅರಿವಿನ ತಿಳಿಬೆಳಕ ಹೊತ್ತಿಸಲು
ಮೆಲ್ಲನೆ ಒಳ ಬಾ
ನೀ ಕನಸ ಕಿಡಿಯಾಗಿ!

March 16, 2014

ಸಿಗಲೇಬಾರದು ಶಬ್ದಕ್ಕೆ,
ಸಾಕು ಅರ್ಥ-
ಗಳ ಹೊಳಪು...

**************

ಆಕಾರದಿಂದ ಅರ್ಥಕ್ಕೆ
ಮಹತ್ವ ಯಾವಾಗ ಹೊರಳಿತೊ?
ಅಕ್ಷರಕ್ಕೂ ತಿಳಿಯಲಿಲ್ಲ...