ಇಲ್ಲಿ ಯುನಿವರ್ಸಿಟಿ ಹಾಸ್ಟೆಲ್ಲಿನ ಸುತ್ತ
ಎಕ್ಕೆ ಗಿಡದ ಬಸಿರೊಡೆದು
ಬಿಳಿ ಬಿಳಿ ಅಜ್ಜನಗಡ್ಡ ಹಾರುವಾಗ
ಬಿಳಿ ಪಂಚೆಯ ಉದ್ದ ಮೂಗಿನ ಅಜ್ಜ,
ಅವನ ಔಷಧಿ ಪೆಟ್ಟಿಗೆ,ದಪ್ಪ ಕನ್ನಡಕ
ಕಾದಂಬರಿ,ಗುರುಚರಿತ್ರೆ,ಗಣಹೋಮ
ಕುಕ್ಕುರುಗಾಲಲ್ಲಿ ಕೂತು ದೋಸೆ ತಿನ್ನುತ್ತಿದ್ದ
ದಪ್ಪ ಗ್ಲಾಸಲ್ಲಿ ಚಾ ಕುಡಿಯುತ್ತಿದ್ದ
ತಂಬುಳಿಗೆ ಬೆಲ್ಲ ಕಡಿಮೆಯೆನ್ನುತ್ತಿದ್ದ
ಆರಾಮ ಕುರ್ಚಿಗೊರಗಿ ಚಿತ್ರಗೀತೆ ಕೇಳುತ್ತಿದ್ದ
'ಅಪ್ಪಾ' ಎಂದು ಹತ್ತಿರ ಕರೆಯುತ್ತಿದ್ದ
ನಡುಗುವ ಕೈಯಿಂದ ಕಲ್ಲುಸಕ್ಕರೆ,ಒಣದ್ರಾಕ್ಷಿ ಕೊಡುತ್ತಿದ್ದ
ಕಣ್ಣು ಮುಚ್ಚಿ ಮಾತಾಡುತ್ತಿದ್ದ
ಇದ್ದರೂ ಇಲ್ಲದವನಂತಿದ್ದ
ನೆನಪುಗಳು ಹಾರಾಡಿ
ಮರೆಯಾಗುತ್ತವೆ,ಹೊಸತು
ಹಳೆಯದನ್ನು ಮರೆಸುತ್ತವೆ...
ಆದರೂ ಅಜ್ಜ ಈಗ ಇದ್ದಿದ್ದರೆ
ನನಗಿಂತ ತುಂಬಾ ಕುಳ್ಳನಾಗಿ ಕಾಣುತ್ತಿದ್ದ
ಅನ್ನಿಸುತ್ತದೆ..!
No comments:
Post a Comment