ಪ್ರತೀ ರಾತ್ರಿ ಮಲಗುವ ಮುನ್ನ
ಅನ್ನಿಸುತ್ತದೆ ಬ್ರೆಕ್ಟ್
ನಾನೂ ಒಂದು ನಾಟಕ
ಬರೆಯಬೇಕಿತ್ತು!
ನಾಟಕವೆಂದರೆ ಪಕ್ಕಾ ನಾಟಕ
ವಾಸ್ತವದಲ್ಲಿ ಉರುಳುವ ನಾಟಕ
ಉರುಳಿ ಉರುಳಿಸಿ ಹೊರಳಾಡುವ ನಾಟಕ
ಒಂದು ಕ್ಷಣದ ಭೀಕರ ನಾಟಕ
ಕಂಡರಿಯದ ನಾಟಕದ ಹೊಸಮುಖ!
ಗಾಂಧಿ ಹಿಟ್ಲರ್ ಪಾತ್ರಗಳಿದ್ದರೂ
ಯಾರ ಕಣ್ಣಿಗೂ ಬೀಳಲಾರರು
ರಂಗದ ಮೇಲಿರುವವನೊಬ್ಬನೇ.
ಹಿಮ್ಮೇಳ ಹಾಡು ಢಂ ಢಂ ಇದ್ದರೂ
ಯಾರಿಗೂ ಸಹ ಕೇಳಿಸಲಾರದು
ಸದ್ದು ಮಾಡುವವನೊಬ್ಬನೇ!
ಅಳಲಾರನು ನಗಿಸಲಾರನು
ಬಣ್ಣ ಹಚ್ಚಿದ ಮುಖ ನಿರ್ಲಿಪ್ತ,
ಕುಣಿಯಲಾರನು ಕದಲಲಾರನು
ಸರಪಳಿ ಬಿಗಿದಿವೆ ಅತ್ತಿತ್ತ
ನೇಣಿನ ಕುಣಿಕೆ ಕತ್ತಿನ ಸುತ್ತ!
'ರೆಪ್ಪೆ ಕೂಡ ಅಲುಗಿದಂತಿಲ್ಲ
ಕಡಿಮೆಯಾಯಿತು ಬೆಳಕು'
(ರಾಗ ಎಳೆಯದಿರು ಪ್ರೇಕ್ಷಕ ಪ್ರಭುವೇ
ನಾಟಕಕ್ಕವನೇ ಬೆಳಕು!)
ಶಂಕೆ ಬರದಿರಲಿ ನೋಡುಗನಿಗೆ
ಕೇಳಲಿ ಉಸಿರಿನ ಸದ್ದು
ಹಿಂದೆಯೇ ಎದೆಬಡಿತದ ಗುದ್ದು!
ಸೆಟೆದುಕೊಳ್ಳಲಿ ನರನಾಡಿಗಳು
ಅವನೊಳಗೆ ಬೀಳುತ ಎದ್ದು.
ಕಂಡಿದ್ದೇನು? ಕಾಣದ್ದೇನು?
'ಅಯ್ಯಯ್ಯೋ ಮುಚ್ಚಿರಿ ಅವನ ಕಣ್ಣನ್ನು'
(ಮುಚ್ಚಿಕೊಳ್ಳಿರಿ ನಿಮ್ಮದನ್ನು!)
ಅವನು ಕಾಣದ ಇವನ ನಾಟಕ
ಇವನು ಊಹಿಸದ ಅವನ ನಾಟಕ
ಬೆತ್ತಲು ರಂಗದ ಬಣ್ಣ ನಾಟಕ
ಕನ್ನಡಿ ಕಣ್ಣಿನ ಬಿಂಬ ನಾಟಕ
ಪರದೆ ಬಿದ್ದರೂ ಮುಗಿಯದ ನಾಟಕ
ಕಂಡವರಿಗಷ್ಟೇ ಕಾಣುವ ನಾಟಕ
ಉರುಳಿ ಉರುಳಿಸಿ ಹೊರಳಾಡುವ ನಾಟಕ
ಒಂದು ಕ್ಷಣದ ಭೀಕರ ನಾಟಕ
ನನಗೂ ಬರೆಯಬೇಕಿತ್ತು...
No comments:
Post a Comment