April 28, 2012

ಕಮಲಾದಾಸ್ ರ 'My Grandmother's House' ಕವನದ ಕನ್ನಡರೂಪ


( There is a house now far away where once
I received love……. That woman died,
The house withdrew into silence, snakes moved
Among books, I was then too young
To read, and my blood turned cold like the moon
How often I think of going
There, to peer through blind eyes of windows or
Just listen to the frozen air,
Or in wild despair, pick an armful of
Darkness to bring it here to lie
Behind my bedroom door like a brooding
Dog…you cannot believe, darling,
Can you, that I lived in such a house and
Was proud, and loved…. I who have lost
My way and beg now at strangers’ doors to
Receive love, at least in small change? )


ನನ್ನ ಪ್ರೀತಿಯ ಮನೆ
ದೂರದಲ್ಲಿದೆ.
ಆ ಮುದುಕಿ ಸತ್ತಮೇಲೆ
ಅವಳ ಬಿಳಿ ಸೀರೆಯಂತೆ
ಮೌನವನ್ನುಟ್ಟ ಮನೆಯ
ಪುಟಗಳ ನಡುವೆ,
ಗೋಡೆಯ ಬಿರುಕುಗಳಲ್ಲಿ
ಹಾವುಗಳು ಹರಿದಾಡಿದವು.
ನನ್ನ ಪುಟ್ಟ ಜೀವ ಹೆಪ್ಪುಗಟ್ಟಿತು.

ಅದೆಷ್ಟು ಬಾರಿ ಅಲ್ಲಿಗೆ ಹೋಗುವ
ಯೋಚನೆ  ಮಾಡಿಲ್ಲ ನಾನು?
ಕಿಟಕಿಗಳ ಖಾಲಿ ಕಣ್ಣುಗಳಾಚೆ ಇಣುಕಿ
ಹೆಂಚಿನ ಕಾವಿಗೆ ಮೈಯ್ಯೊಡ್ಡಿ
ನೀರವದ ಸದ್ದಿಗೆ ಕಿವಿಗೊಟ್ಟು
ಅಥವಾ ಕಡೇ ಪಕ್ಷ
ಹುಚ್ಚು ನಿರಾಸೆಯಿಂದ
ಬೊಗಸೆ ತುಂಬಾ ಕತ್ತಲು ತಂದು
ಕೊನೆ ಬಾಗಿಲಲ್ಲಿ ಬಿದ್ದುಕೊಂಡಿರಲು
ನಾಯಿಯಂತೆ ನೇಮಿಸುವುದಕ್ಕಾಗಿ...

ಇಲ್ಲ,
ಆ ಮನೆಯ ಅಂಗಳದಲ್ಲಿ
ಜಿಟಿ ಮಳೆಯ ತಂಪಲ್ಲಿ
ಗುಲಾಬಿ,ಜಾಜಿ,ಮಲ್ಲಿಗೆಗಳೆದುರು
ನಾ ಹೊಸ ಗೆಜ್ಜೆ ಕಟ್ಟಿ ಕುಣಿದಿದ್ದನ್ನ
ನಿನ್ನಿಂದ ಊಹಿಸಲೂ ಆಗುವುದಿಲ್ಲ ಬಿಡು.
ಈ ಹೊತ್ತಿ ಗೆ ಉಳಿದಿರುವುದು
ದಾರಿಯೊಡನೆ ಹೆಜ್ಜೆಗಳನ್ನೂ ಕಳೆದುಕೊಂಡು
ನೀರಸದಲ್ಲಿ ಮುಳುಗಿ
ಒಂದು ಚಿಕ್ಕ ಬದಲಾವಣೆಗಾಗಿ
ಯಾರ್ಯಾರದೋ ಮನೆ ಬಾಗಿಲು ತಟ್ಟಿ
ಬೇಡುತ್ತಿರುವ ನಾನು ಮಾತ್ರ.                

April 21, 2012

ಕಮಲಾದಾಸ್ ರ 'An Introduction' ಕವನದ ಕೊನೆಯ ಕೆಲವು ಸಾಲುಗಳ ಕನ್ನಡರೂಪ

(… I met a man, loved him. Call
Him not by any name, he is every man
Who wants a woman, just as I am every
Woman who seeks love. In him . . . the hungry haste
Of rivers, in me . . . the oceans’ tireless
Waiting. Who are you, I ask each and everyone,
The answer is, it is I. Anywhere and,
Everywhere, I see the one who calls himself I
In this world, he is tightly packed like the
Sword in its sheath. It is I who drink lonely
Drinks at twelve, midnight, in hotels of strange towns,
It is I who laugh, it is I who make love
And then, feel shame, it is I who lie dying
With a rattle in my throat. I am sinner,
I am saint. I am the beloved and the
Betrayed. I have no joys that are not yours, no
Aches which are not yours. I too call myself I.
)

ನಾನು ಒಬ್ಬನನ್ನ ಭೇಟಿಯಾದೆ,ಅವನನ್ನೇ ಪ್ರೀತಿಸಿದೆ.
ಅವನಿಗೂ ಒಂದು ಹೆಸರಿಟ್ಟು
ಜಾತಿ ಕುಲ ಗೋತ್ರಕ್ಕಾಗಿ ಹುಡುಕಬೇಡಿ.
ಹೇಗೆ ಪ್ರೀತಿಗಾಗಿ ಹುಡುಕಾಡುವ 
ಪ್ರತೀ ಹೆಣ್ಣಿನಂತೆ ನಾನೋ
ಹಾಗೆಯೇ ಹೆಣ್ಣಿಗಾಗಿ ಹುಡುಕಾಡುವ
ಪ್ರತೀ ಗಂಡು ಆತ.
ಅವನಲ್ಲಿ...ತುರ್ತಿನಲ್ಲಿ ಓದುವ ಹಸಿದ ನದಿಗಳು.
ಮತ್ತೆ ನನ್ನಲ್ಲಿ...ಶಾಂತವಾಗಿ ಕಾಯುವ ಆಳವಾದ ಸಾಗರಗಳು.

ನೀನ್ಯಾರೆಂದು ಕಂಡ ಕಂಡವರನ್ನೆಲ್ಲ ಕೇಳಿದ್ದೇನೆ.
ನಾಲ್ಕು ಗೋಡೆಗಳ ಮಧ್ಯೆ
ಬಂಧಿಯಾದ ಪ್ರತಿಯೊಬ್ಬನ
ಉತ್ತರವೂ ಒಂದೇ
'ನಾನು'.
ಅಪರಿಚಿನ ಊರಿನ ಬಾರುಗಳಲ್ಲಿ
ಮಧ್ಯರಾತ್ರಿಯವರೆಗೆ ಕುಡಿಯುತ್ತ ಕೂರುವ
ನಗುವ,ಪ್ರೀತಿಸುವ
ಮತ್ತು ಮರುಕ್ಷಣವೇ ಮಾಡಬಾರದ್ದು ಮಾಡಿದವಳಂತೆ
ಹೇಸುತ್ತ ಮರುಗುವ ನಾನೇ
ಬಡಬಡಿಸುತ್ತ ಸಾಯಲು ಬೀಳುವುದು.
ನಿಮಗದರ ಚಿಂತೆ ಬೇಡ.
ನಾನು ಪಾಪಿ,ಸಂತಳೂ ಕೂಡ
ಪ್ರೀತಿಸಿ ಹಿಗ್ಗಿದವಳು,
ಕುಗ್ಗಿದವಳು ಕೂಡ.
ನಿಮ್ಮದಲ್ಲದ ಯಾವ ಸುಖವೂ ನನ್ನದಲ್ಲ,
ನೋವೂ ಕೂಡ.
ನಿಮ್ಮಂತೆ ನಾನು ಕೂಡ ನನ್ನ ಕರೆದುಕೊಳ್ಳುತ್ತೇನೆ
'ನಾನು'.          

April 20, 2012

ಬರೆದಾದ ಮೇಲೆ ಪ್ರತೀ ಬಾರಿ
ಪುಟಗಳ ಸಾಲುಗಳ
ಅಕ್ಷರಗಳ ಲೆಕ್ಕ ಹಾಕುವ
ಚಟ ನನಗೆ!
ತುಂಬಿಸಿ ಸುಖಿಸಿದ ತೃಪ್ತಿಯೊಡನೆ
ಮೊಗೆದು ಬರಿದಾಗಿಸಿದ ಬೇಸರ!!!   
ನೀನೇನೋ ಅಂದು
ನನ್ನ ಹೆಜ್ಜೆಗಳ ಮೇಲೆ
ಹೆಜ್ಜೆಯಿಟ್ಟು ನಡೆವ ಮಾತಾಡಿದ್ದೆ,
ನಾನೂ ಕನಸ ಕಟ್ಟಿದ್ದೆ.
           ಆದರೆ ಗೆಳತೀ
           ಈ ಡಾಂಬರು ರೋಡಿನ ಮೇಲೆ
           ಹೆಜ್ಜೆ ಗುರುತೇ ಮೂಡುವುದಿಲ್ಲವಲ್ಲ!!!

ಅಜ್ಜನಗಡ್ಡ ಹಾರುವಾಗ

ಇಲ್ಲಿ ಯುನಿವರ್ಸಿಟಿ ಹಾಸ್ಟೆಲ್ಲಿನ ಸುತ್ತ
ಎಕ್ಕೆ ಗಿಡದ ಬಸಿರೊಡೆದು
ಬಿಳಿ ಬಿಳಿ ಅಜ್ಜನಗಡ್ಡ ಹಾರುವಾಗ
ಬಿಳಿ ಪಂಚೆಯ ಉದ್ದ ಮೂಗಿನ ಅಜ್ಜ,
ಅವನ ಔಷಧಿ ಪೆಟ್ಟಿಗೆ,ದಪ್ಪ ಕನ್ನಡಕ
ಕಾದಂಬರಿ,ಗುರುಚರಿತ್ರೆ,ಗಣಹೋಮ
ಕುಕ್ಕುರುಗಾಲಲ್ಲಿ ಕೂತು ದೋಸೆ ತಿನ್ನುತ್ತಿದ್ದ
ದಪ್ಪ ಗ್ಲಾಸಲ್ಲಿ ಚಾ ಕುಡಿಯುತ್ತಿದ್ದ
ತಂಬುಳಿಗೆ ಬೆಲ್ಲ ಕಡಿಮೆಯೆನ್ನುತ್ತಿದ್ದ
ಆರಾಮ ಕುರ್ಚಿಗೊರಗಿ ಚಿತ್ರಗೀತೆ ಕೇಳುತ್ತಿದ್ದ
'ಅಪ್ಪಾ' ಎಂದು ಹತ್ತಿರ ಕರೆಯುತ್ತಿದ್ದ
ನಡುಗುವ ಕೈಯಿಂದ ಕಲ್ಲುಸಕ್ಕರೆ,ಒಣದ್ರಾಕ್ಷಿ ಕೊಡುತ್ತಿದ್ದ
ಕಣ್ಣು ಮುಚ್ಚಿ ಮಾತಾಡುತ್ತಿದ್ದ
ಇದ್ದರೂ ಇಲ್ಲದವನಂತಿದ್ದ
ನೆನಪುಗಳು ಹಾರಾಡಿ
ಮರೆಯಾಗುತ್ತವೆ,ಹೊಸತು
ಹಳೆಯದನ್ನು ಮರೆಸುತ್ತವೆ...
ಆದರೂ ಅಜ್ಜ ಈಗ ಇದ್ದಿದ್ದರೆ
ನನಗಿಂತ ತುಂಬಾ ಕುಳ್ಳನಾಗಿ ಕಾಣುತ್ತಿದ್ದ
ಅನ್ನಿಸುತ್ತದೆ..!
ಊರಾಚೆಯ ಸ್ಲಮ್ಮಿನ
ಬೆಂದು ಒಣಗಿ ಮುರುಟಿಹೋದ
ಹಾಡಿ ಬೇಡಿ ಮೂಕವಾದ
ಆಯ್ದು ಆಯ್ದು ಖಾಲಿಯಾದ
ಯಾರ ತೀಟೆಗೋ ತೆರೆದ ಕಣ್ಣುಗಳು,
ಎಳೆದು ಹರಿದು ಚಿಂದಿಯಾದ
ಹೊಲಿದು ಹೊದ್ದರೂ ಬೆತ್ತಲಾದ
ಬರಡು ಎದೆಯ ಚೀಪುವ
ಒಡೆದ ಕಪ್ಪು ತುಟಿಗಳು
              ದಿನವಿಡೀ ಕೂತು ಬರೆದ
              ಕವಿತೆಯಂತೆಯೇ ಕಾಣುತ್ತವೆ!!!                 
        

April 13, 2012

ಕತ್ತಲಾಗು ಗೆಳತಿ!
ಬೆಳಕ ಹಿಂದಿನ
ನಿಲ್ಲದ ಉರಿಯುವಿಕೆ,
ಮೂಕ ರೋಧನ ಕಂಡಾಗಿನಿಂದ
ಕುರುಡು ಕತ್ತಲೆಯೇ ಚಂದವೆನಿಸುತ್ತಿದೆ,
ಕಾಣೆಯಾಗುವುದೇ ಹಿತವೆನಿಸುತ್ತಿದೆ!!!

April 11, 2012

ಪ್ರೀತಿ

ಕಾಮ ಸುಡು ಸುಡು ಬೆಂಕಿ
ಉರಿದು ಬೂದಿಯಾಗಿ
ಮುಗಿದುಹೋಗುತ್ತದೆ.
ಆದರೆ ಪ್ರೀತಿ?
ಹಾಳಾದ್ದು ಒದ್ದೆ ಕಟ್ಟಿಗೆ!
ದಿದರೆ ಹೊಗೆ
ಊದದಿದ್ದರೆ ಉಪವಾಸ
ಒಟ್ಟಿನಲ್ಲಿ ಸಾಯೋ ತನಕ ನರಳಾಟ!!!

April 10, 2012

ಕನವರಿಕೆ

ಅವತ್ತೊಂದು ದಿನ ಎಚ್ಚರಾದಾಗ
ನಡೆಯಬಾರದ್ದು ನಡೆದದ್ದು
ಕನಸೋ ವಾಸ್ತವವೋ ಗೊತ್ತಾಗದೆ
ಅಳು,ಸಿಟ್ಟು,ಸಾಂತ್ವನ,ಪಲಾಯನ
ಎಲ್ಲ ಅಸ್ಪಷ್ಟವಾಗಿ
ಹಗಲು ಕಳೆಯದೆ
ರಾತ್ರಿ ಮುಗಿಯದೆ
ಹುಚ್ಚು ಹಿಡಿದ ಬಗ್ಗೆ
ಅನುಮಾನ ಮೂಡಿ
ರಾಮಾನುಜನ್ ಕವನ ಮಾತ್ರ
ನೆನಪಿನಲ್ಲುಳಿದು ತಲೆ ತಿರುಗಿ
ಮೈ ಜ್ವರ ಬಿಡುವಾಗ
ಬೆವೆತಂತೆ ಬೆವೆತಾಗ
ಹುಚ್ಚು ಬಿಟ್ಟಂತಾಗಿ
ವಿಚಿತ್ರ ಧೈರ್ಯ ಬಂದು
ಕನಸಿನೊಳಗೆ ಮತ್ತೊಂದು
ಕನಸು ಯಾಕಿರಬಾರದು
ಅನ್ನಿಸಿ ಎಚ್ಚರಾಗಲು
ಕಾಯುತ್ತ ಕುಳಿತಿದ್ದೇನೆ
ಅಂದರೆ
ಇನ್ನೂ ಮಲಗಿದ್ದೇನೆ!!!
ಕಾಲು ಮೇಲಾಗಿ ತಲೆ ಕೆಳಗಾಗಿ
ಹಾವು ಹರಿದಾಡಿ ಸುತ್ತಿ ಎಳೆದಾಡಿ
ಗಾಜು ಚೂರಾಗಿ ಬಿಂಬ ನೂರಾಗಿ
ಪ್ರೀತಿ,ಕಾಮ,ಹಸಿವು,ಸಾವು...
ಬರೆದೇ ಬರೆದೆ!
ಕಾನ್ಮೆಂಟ್ ಸ್ಕೂಲಿನವನಿಗೆ ಅರ್ಥವಾಗದೆ
ಕೊನೆಗೆ ಕನ್ನಡ ಶಾಲೆ ವಿಮರ್ಶಕ
ಮೂಗು ಓರೆ ಮಾಡಿ
ಎಲ್ಲ ಹಳಸಲು ಎಂದ!
ಅಚ್ಚಾಗಿ ಬಾಯಿಪಾಠವಾಗಿ
ಹಾರ ತುರಾಯಿಗಳೆಲ್ಲ ಒಣಗಿ
ಕಪಾಟಿನಲ್ಲಿ ಕಪ್ಪೆ ಉಚ್ಚೆ ಹೊಯ್ದಾಗ
ನನಗೂ ಹಾಗೆ ಅನ್ನಿಸಿ
ವಾಸನೆ ತಡೆಯಲಾರದೆ ವಾಕರಿಸಿ
ಒಣ ಕಟ್ಟಿಗೆಯಡಿಗಿಟ್ಟು
ಬಚ್ಚಲೊಲೆಯಲ್ಲಿ ಕಡ್ಡಿ ಗೀರಿದರೆ
ಯಾರೋ ಹೇಳಿದಂತೆ
ಚಿಮ್ಮಿ,ಬೆಳಗಿ,ತಟ್ಟಿ,ತಣಿಸಿತು
ನನ್ನ ಕಾವ್ಯ!!!

ನಾಟಕ

ಪ್ರತೀ ರಾತ್ರಿ ಮಲಗುವ ಮುನ್ನ
ಅನ್ನಿಸುತ್ತದೆ ಬ್ರೆಕ್ಟ್
ನಾನೂ ಒಂದು ನಾಟಕ
ಬರೆಯಬೇಕಿತ್ತು!

ನಾಟಕವೆಂದರೆ ಪಕ್ಕಾ ನಾಟಕ
ವಾಸ್ತವದಲ್ಲಿ ಉರುಳುವ ನಾಟಕ
ಉರುಳಿ ಉರುಳಿಸಿ ಹೊರಳಾಡುವ ನಾಟಕ
ಒಂದು ಕ್ಷಣದ ಭೀಕರ ನಾಟಕ
ಕಂಡರಿಯದ ನಾಟಕದ ಹೊಸಮುಖ!

ಗಾಂಧಿ ಹಿಟ್ಲರ್ ಪಾತ್ರಗಳಿದ್ದರೂ
ಯಾರ ಕಣ್ಣಿಗೂ ಬೀಳಲಾರರು
ರಂಗದ ಮೇಲಿರುವವನೊಬ್ಬನೇ.
ಹಿಮ್ಮೇಳ ಹಾಡು ಢಂ ಢಂ ಇದ್ದರೂ
ಯಾರಿಗೂ ಸಹ ಕೇಳಿಸಲಾರದು
ಸದ್ದು ಮಾಡುವವನೊಬ್ಬನೇ!

ಅಳಲಾರನು ನಗಿಸಲಾರನು
ಬಣ್ಣ ಹಚ್ಚಿದ ಮುಖ ನಿರ್ಲಿಪ್ತ,
ಕುಣಿಯಲಾರನು ಕದಲಲಾರನು
ಸರಪಳಿ ಬಿಗಿದಿವೆ ಅತ್ತಿತ್ತ
ನೇಣಿನ ಕುಣಿಕೆ ಕತ್ತಿನ ಸುತ್ತ!

'ರೆಪ್ಪೆ ಕೂಡ ಅಲುಗಿದಂತಿಲ್ಲ
ಕಡಿಮೆಯಾಯಿತು ಬೆಳಕು'
(ರಾಗ ಎಳೆಯದಿರು ಪ್ರೇಕ್ಷಕ ಪ್ರಭುವೇ
ನಾಟಕಕ್ಕವನೇ ಬೆಳಕು!)

ಶಂಕೆ ಬರದಿರಲಿ ನೋಡುಗನಿಗೆ
ಕೇಳಲಿ ಉಸಿರಿನ ಸದ್ದು
ಹಿಂದೆಯೇ ಎದೆಬಡಿತದ ಗುದ್ದು!
ಸೆಟೆದುಕೊಳ್ಳಲಿ ನರನಾಡಿಗಳು
ಅವನೊಳಗೆ ಬೀಳುತ ಎದ್ದು.
ಕಂಡಿದ್ದೇನು? ಕಾಣದ್ದೇನು?
'ಅಯ್ಯಯ್ಯೋ ಮುಚ್ಚಿರಿ ಅವನ ಕಣ್ಣನ್ನು'
(ಮುಚ್ಚಿಕೊಳ್ಳಿರಿ ನಿಮ್ಮದನ್ನು!)

ಅವನು ಕಾಣದ ಇವನ ನಾಟಕ
ಇವನು ಊಹಿಸದ ಅವನ ನಾಟಕ
ಬೆತ್ತಲು ರಂಗದ ಬಣ್ಣ ನಾಟಕ
ಕನ್ನಡಿ ಕಣ್ಣಿನ ಬಿಂಬ ನಾಟಕ
ಪರದೆ ಬಿದ್ದರೂ ಮುಗಿಯದ ನಾಟಕ
ಕಂಡವರಿಗಷ್ಟೇ ಕಾಣುವ ನಾಟಕ
ಉರುಳಿ ಉರುಳಿಸಿ ಹೊರಳಾಡುವ ನಾಟಕ
ಒಂದು ಕ್ಷಣದ ಭೀಕರ ನಾಟಕ
ನನಗೂ ಬರೆಯಬೇಕಿತ್ತು...

ಹೀಗೊಮ್ಮೆ ಯೋಚಿಸಿಬಿಟ್ಟರೆ...

ಥತ್!
ಹೀಗೊಮ್ಮೆ ಯೋಚಿಸಿಬಿಟ್ಟರೆ
ಅಲ್ಲಿಗೇ ಮುಗಿಯುವುದಿಲ್ಲ.
ತಲೆ ಕೆಡಿಸಿಕೊಂಡು
ಕೂತು-ಬರೆದು-ತಿದ್ದಿ
ಅವಳಿಂದ,ಅವರಿಂದ ಓದಿಸಿ
ಉಸಿರು ಕಟ್ಟಿಕೊಂಡು ಕಾದು
ಚಪ್ಪಾಳೆ ಗಿಟ್ಟಿಸಿ ಹಿಗ್ಗಬೇಕು!

ಬರೀ ಹುಟ್ಟಿಬಿಟ್ಟರೆ ಆಗುವುದಿಲ್ಲ ಸ್ವಾಮೀ!
ಕೂದಲು ಬೆಳೆಸಿಕೊಳ್ಳುತ್ತ ದೊಡ್ಡವರಾಗಿ
ಕಲಿತು ಕೆಲಸ ಹುಡುಕಿ
ಮದುವೆ ಮುಂಜಿ ಮಾಡಿಕೊಂಡು
ಸೂರು ಸಂಸಾರ ಕಟ್ಟಿಕೊಂಡು
ರಾಮ-ಶಿವ ಅನ್ನಬೇಕು
ಹತ್ತಬೇಕು,ಇಳಿಯಬೇಕು
ತುಳಿಯಬೇಕು,ತುಳಿಸಿಕೊಳ್ಳಬೇಕು
ನಗಬೇಕು,ಅಳಬೇಕು
ಜೊತೆಗೇ ಇನ್ನೂ ಏನೇನೋ...
ಕೊನೆಗೆ ಸಾಯುವುದೂ ಕಡ್ಡಾಯವೇ!

ಒಂದರ ಬೆನ್ನಿಗೆ ಎಷ್ಟೊಂದು ಹಲವುಗಳು!

ಬೇಕಾದ್ದು
ಕಾಳಸಂತೆಯಲ್ಲಿ ಬಿಡಿ ಬಿಡಿಯಾಗಿ
ಅಥವಾ ಸೂಳೆಯ ಬಳಿ ಕ್ಷಣಿಕವಾಗಿ
ಸಿಗುವಂತೆ
ಸಿಕ್ಕಿಬಿಡುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ವಿಪರ್ಯಾಸ

ಕಾಲೆತ್ತಿ ಕಂಬಕ್ಕೆ ಹಾರಿಸ-
ಬೇಕೆನ್ನಿಸಿದರೆ ನಾಯಿ
ಎಡಗಾಲೋ ಬಲಗಾಲೋ
ಯೋಚಿಸುವುದಿಲ್ಲ,
ಅದಕ್ಕೆ ಯಾರಂತೆಯೂ ಇರಬೇಕಾಗಿಲ್ಲ!
ಆದರೆ ನಾ ಮಾತ್ರ
ಎಲ್ಲವನ್ನು ಎಲ್ಲರಂತೆ
ಮಾಡಬೇಕಾಗಿದೆ...
ಈ ಬದುಕಿಗೂ
ಎಷ್ಟೊಂದು
ಕತ್ತಲು ಮುಖಗಳು?
ನಾ ಉರಿದಂತೆ
ಒಂದೊಂದರ ಮೇಲೆ
ಬೆಳಕು ಬೀಳುತ್ತಿದೆ!

***************

ಅಂದುಕೊಂಡಂತೆ ಬದುಕಲಾಗುವುದಿಲ್ಲ-
ವೆಂದು ಗೊತ್ತಾಗಿ
ತುರ್ತಿನಲ್ಲಿ
ಬರೆಯಲಾರಂಭಿಸಿದೆ!
ಕರಿಬೇವಿನ ಮರದ
ಬೆಳೆದ ಗೆಲ್ಲು ಮುರಿದರೆ
ಸಂದಿ ಸಂದಿಯಲ್ಲೆಲ್ಲ ಟಿಸಿಲೊಡೆದು
ನೀರು ಬಿಸಿಲನ್ನೆಲ್ಲ ಕುಡಿದು
ಮಾಸ ಬದಲಾಗುವಷ್ಟರಲ್ಲಿ
ಚಿಗುರಿಬಿಡುತ್ತದೆ.
ಹೊಸ ಉಡುಗೆ ತೊಟ್ಟು
ನಳನಳಿಸುತ್ತಲೇ ಮತ್ತೆ ಬೆಳೆದುಬಿಡುತ್ತದೆ.

ಮುರಿದಂತೆ ಬೆಳೆವ
ಬೆಳೆದಂತೆ ಮುರಿಸಿಕೊಳ್ಳುವ
ಎಂದೂ ಮುಗಿಯದ ಈ
ಆಟ ನನಗೂ ಸಾಕಾಗಿದೆ.
ಟಿಸಿಲೊಡೆವ ಸಂದಿಗಳಿಗೆಲ್ಲ
ಬೆಂಕಿ ಬಳಿಯಬೇಕಿದೆ,
ಅದಕ್ಕೂ ಮೊದಲು ಬೇರುಗಳನ್ನು
ಕತ್ತರಿಸಿಕೊಳ್ಳಬೇಕಿದೆ!
ನನ್ನೊಳಗೆ
ಬರೀ ನನ್ನನೆ ನೋಡಿ
ಬೇಸರಾಗಿದೆ ಗೆಳತಿ,
ಒಂದು ಕ್ಷಣ ನಿನ್ನ ನೋಡಲೇ?!
ನನ್ನ ಸಾಲುಗಳಲ್ಲಿ
ಅವಳು ಕಾಣೆಯಾದಾಗ
ಅವಳೊಳಗಿನ
ನನಗೆ ದಿಗಿಲು!
ತಲೆ ಕೆಟ್ಟಾಗಲೆಲ್ಲ
ಬರೆದು ಬರೆದು
ನಾ 'ಖಾಲಿ'ಯಾಗುತ್ತಿದ್ದೇನೆ,
ಸಾಲ ಸಿಗುತ್ತಿಲ್ಲ!
ನೀವು ಆ ರೋಡಿನಂತೆ
ಎಷ್ಟೋ ಮಳೆಗಾಲಗಳನ್ನು
ಕಂಡು ಜಡವಾಗಿರಬಹುದು.
ಆದರೆ ನನ್ನನ್ನು ದೊಡ್ಡ ಮಳೆಗೆ
ಊರ ಹೊಲಸನ್ನೆಲ್ಲ ತೇಲಿಸಿಕೊಂಡು
ಬರುವ ರಾಡಿ ನೀರಿನಂತೆ
ನೆನಪುಗಳು
ಅಸಹ್ಯವಾಗಿ ಹಿಂಸಿಸುತ್ತವೆ!
ಪ್ರತೀ ರಾತ್ರಿ ನನ್ನೊಳಗೂ
ಮಿತಿಯಿರದ ಮೈಥುನ,
ಬಿಳಿ
ಬಯಲ ತುಂಬೆಲ್ಲ
ಹಸಿ ಹಸಿ ಬ್ರೂಣ!

April 9, 2012

ಅಳುತ್ತಿದ್ದ ಕೊಲೆಗಾರನಿಗೆ
ಪೋಲೀಸನಲ್ಲಿ ತಾನೇ ಕಂಡು
ನಗುತ್ತ ಗಲ್ಲಿಗೇರಿದ!!!