May 2, 2012

ಮಾತು

೧.
ಮಾತೆಂದರೆ ಸೀರಿಯಸ್
ಚರ್ಚೆ,ವಾದ,ಭಾಷಣ
ಪ್ರಬಂಧ,ವಿಮರ್ಶೆ,ಗಾದೆಯಲ್ಲ...
ಮಾತೆಂದರೆ ಬರೀ ಮಾತಷ್ಟೇ!
ಯಾರದ್ದೋ ಅಫೇರು,ಯಾವುದೋ ಪಿಕ್ಚರು
ಹಾಡು,ಮ್ಯಾಚು,ಜಗಳ
ಒಮ್ಮೊಮ್ಮೆ ಪಾಲಿಟಿಕ್ಸು,ಪೋಲಿ ಜೋಕ್ಸು
ಅಥವಾ ಏನಾದರೂ...
ಉಪ್ಪು,ಹುಳಿ,ಖಾರ
ಸಾಕು ಉಪ್ಪಿನಕಾಯಿಗೆ!

೨.
ಆದರೆ ವಿಳಾಸ ಕಳೆದುಹೋಗಿದೆ.
ಊರಿನ ಮಳೆ,ಬೆಳೆ,ಹಬ್ಬ,ರೋಗ
ಅಡಿಕೆ ಪೇಟೆ ಧಾರಣೆಯಿಂದ
ಇಲ್ಲಿನ ಸೆನ್ಸೆಕ್ಸು,ಟ್ರೆಂಡಿಗೆ ಹೊರಳುವಾಗ
ಹಳ್ಳದ ಸಂಕದಲ್ಲೋ
ಊರಾಚೆಯ ಕಾಲುದಾರಿಯಲ್ಲೋ
ಬಸ್ಸು ಹತ್ತುವಾಗಲೋ
ರೈಲಿಳಿಯುವಾಗಲೋ
ರಿಕ್ಷಾದವನಿಗೆ ದುಡ್ಡು ಕೊಡುವಾಗಲೋ
ಕರೆಂಟು,ಕೇಬಲ್,ವಾಟರ್,ಪೇಪರ್
ಹಾಲಿನ ಬಿಲ್ಲು ಕಟ್ಟುವಾಗಲೋ
ಹದಿನೈದನೇ ಮಹಡಿಯ ರೂಮಲ್ಲಿ
ಕಸ ಗುಡಿಸುವಾಗಲೋ
ಅಥವಾ ಲೈಬ್ರರಿಯ ಪುಸ್ತಕದ ಮಧ್ಯದಲ್ಲೋ...
ಮಾತಿನ ವಿಳಾಸ ಕಳೆದುಹೋಗಿದೆ!

೩.
ಮಾತು,ಮಾತಾಡುವ ಮೌನ
ಅದಕ್ಕೂ ಅರಮನೆ,ರಾಜ-ರಾಣಿ...
ಎಲ್ಲ ಕವಿತೆಗಷ್ಟೇ!
ಇಲ್ಲಿ ಒಂದಕ್ಕೆ ನೆಲೆಯಿಲ್ಲ
ಮತ್ತೊಂದಕ್ಕೆ ಬಿಡುವಿಲ್ಲ.
ಶಬ್ದ-ನಿಶ್ಶಬ್ದಗಳ ಮಧ್ಯೆ
ವ್ಯಕ್ತ-ಅವ್ಯಕ್ತಗಳ ಕಿಡಿಗೆ
ಹೊಗೆಯಾಡುವ ಸಂಶಯ ಸ್ಮಶಾನ,
ಗೋಡೆ,ಟೇಬಲ್ಲು,ನೋಟು,ಕೋಟುಗಳ
ಮಾಡರ್ನ್ ಸಂವಾದ.
ಕ್ಷಮಿಸಿ,ದಡ್ಡ ನಾನು
ಹೊರಗಿನವನು!

೪.
ಮಾತಾಡು...
ಬರೀ ಒಂದು ಹನಿಗೆ
ಲೆಕ್ಕ ಸಿಗದಂತೆ ಚೂರಾಗುವಷ್ಟು
ಕಾದಿದ್ದೇನೆ ನಾನು...

No comments:

Post a Comment