September 29, 2012

ಅನರ್ಥ ಗೀತ!!!

* ನಿದ್ದೆ ನಿಯತಕಾಲಿಕ,
   ಎಚ್ಚರ ತಾತ್ಕಾಲಿಕ!

* ಗಿಡದ ಮುಳ್ಳು ಚುಚ್ಚುತ್ತದೆ,
   ಗಡಿಯಾರದ ಮುಳ್ಳು ಸುತ್ತುತ್ತದೆ!

* ಸೂರ್ಯ ಉರಿದು ಕುಸಿದು ಬಿದ್ದ,
   ಚಂದ್ರ ಸುಡಲು ಎದ್ದು ನಿಂತ!



September 7, 2012

ಚೌಡಯ್ಯನ ಕಥೆ ಕೇಳಿ
ಮೂರ್ತಿಗಳಿಗೆ ಆ-
ಕಳಿಕೆಯಯ್ಯ, ಕಾ-
ಪಾಡಯ್ಯ!

(ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ..!)

August 28, 2012

'ಭಾವಾತಿರೇಕ ಬರಹಕ್ಕಿರಲಿ ಬದುಕಿಗಲ್ಲ'
ಯಾರೋ ಹೇಳಿದ ಮಾತ್ರಕ್ಕೆ
ಬೆಂಕಿ ಸುಡುವುದನ್ನು
ಬಿಡುವುದಿಲ್ಲ!!!

August 24, 2012

ವಾಸ್ತವ

ಮೊನ್ನೆ ಖಾಲಿಯಾದ ಪ್ರೀತಿ
ನಿನ್ನೆ ಹಳಸಿದ ಸ್ನೇಹ
ಯಾವತ್ತೋ ಕಳೆದುಹೋದ ನಗು
ಹುಡುಕಿ,ಕೊಳ್ಳುವ ಹುಚ್ಚು ನನಗೆ...

ಯಾರ ಅಂಗಡಿಯಲ್ಲಿ?
ಯಾವ ರಸ್ತೆಯ ಬದಿಯಲ್ಲಿ?
ಯಾರ ಮನೆಯಂಗಳದಲ್ಲಿ?
ಯಾವ ಪಟ್ಟಣದ ತೊಟ್ಟಿಯಲ್ಲಿ?
ಅಥವಾ...ಮತ್ತೆಲ್ಲಿ???

ಎಲ್ಲಿ? ಎಷ್ಟು? ಹೇಗೆ?
ಚಕ್ರವ್ಯೂಹದೊಳಗೆ ಶಿಖಂಡಿ ಕೂತಿದ್ದಾನೆ!
ಉಸಿರಿಗೇ ಗತಿಯಿಲ್ಲ,
ಪ್ರಹಾರ ದೂರದ ಮಾತು!

ಬಂದಿದ್ದು ನೆನಪಿಲ್ಲ,
ಹೋಗುವುದು ತಿಳಿದಿಲ್ಲ,
ಇರುವಿಕೆಯೇ ಅನುಮಾನ...
ಹೀಗೂ ಒಂದು ವಾಸ್ತವ!!!

May 23, 2012

ಒಬ್ಬನೇ ಕಾಣೆಯಾಗುವುದು
ತುಂಬಾ ಬೋರು!
ಅದಕ್ಕೇ ಅವಳನ್ನು
ಹುಡುಕುತ್ತಿದ್ದೇನೆ!!!

May 8, 2012

ಇನ್ಫೋಸಿಸ್ ಮತ್ತು ಚಂದ್ರ

೧.
ಬಿಸಿ ಬಿಸಿ ತಲೆ ಇನ್ಫೋಸಿಸ್ ಮೇಲೆ
ತಂಪು ತಂಪು ಚಂದ್ರ!
೨.
ಕಂಪ್ಯೂಟರ್ ಮುಂದೆ ಪಿಳಿ ಪಿಳಿ
ದಪ್ಪ ಕನ್ನಡಕದ ಕಪ್ಪು ಗೋಲ,
ಕತ್ತಲ ಸುಖ ಹೊದ್ದ ಕಣ್ಣಲ್ಲಿ
ಹುಣ್ಣಿಮೆಯ ಬಿಳಿ ಗೋಲ!
೩.
ಐ-ಕಾರ್ಡು,ಟೈ,ಇಸ್ತ್ರಿ ಮಾಡಿದ ಬಟ್ಟೆಯೊಳಗೆ
ಹುಚ್ಚು ಕುದುರೆ ಓಟ,
ಅಂಗಿ-ಚೆಡ್ಡಿ ಹಾಕದ ತುಂಟನಿಗೆ
ಕಣ್ಣಾಮುಚ್ಚಾಲೆಯಾಟ!
೪.
ಏಳು,ತೊಳೆ,ಹತ್ತು,ಒತ್ತು,ಸಾಯಿ
ಥತ್ ಟ್ರ್ಯಾಜೆಡಿ!
ಪ್ರೇಯಸಿಯರ ಲೆಕ್ಕೆ ಇನ್ನೂ ಸಿಕ್ಕಿಲ್ಲ
ಆಹಾ ಕಾಮೆಡಿ!
೫.
ಎಲಿಯಟ್ಟನ ಬರಡು ನೆಲದ ಪಕ್ಕ
ಮೈಸೂರಿನ ಘಮ ಘಮ ಮಲ್ಲಿಗೆ!

May 3, 2012

ಗಾಜು
ಒಡೆದರೆ ಚೂರು
ದೀಪ
ಆರಿದರೆ ಕತ್ತಲು
ಮಾತು
ಮುಗಿದರೆ ಮೌನ
ಉಸಿರು
ನಿಂತರೆ ಸಾವು.
       ನಿಶ್ಚಿತ ಸತ್ಯಗಳ
       ತೆರೆಯ ಹಿಂದಿನ ಚೌಕಿಮನೆಯಲ್ಲಿ
       ಬಣ್ಣದ ವೇಷಗಳ ಸಾಲು
       ರಾಜ,ರಾಣಿ,ರಾಕ್ಷಸ...
ಹೂವು
ಒಣಗಿ ಕಸವಾಗುತ್ತದೆ,
ನಾನು
ಏನಾಗುತ್ತೇನೋ ಗೊತ್ತಿಲ್ಲ!