February 11, 2014

ಕುಂವೀ ಹೇಳಿಕೆ ಮತ್ತು ಕೇಸರಿಗಳ ಚಪ್ಪಾಳೆ!

ಸಾಹಿತ್ತಿಕ ವಲಯದಲ್ಲಿ ಒಂದು ಹೊಸ ಅಲೆ ಎದ್ದಿದೆ. ಯಾವಾಗಲೂ ಏಳುತ್ತಿರುತ್ತದೆ,ಆದರೆ ಈ ಬಾರಿ ಸ್ವಲ್ಪ ಜೋರಾಗಿಯೇ ಎದ್ದಿದೆ! ವಿಪರ್ಯಾಸವೆಂದರೆ ಜ್ಞಾನಪೀಠ ಪ್ರಶಸ್ತಿಯ ನೆಪದಲ್ಲಿ ಎದ್ದಿರುವ ಅಲೆಯಲ್ಲಿ ಸನಾತನಿಗಳು ಅಥವಾ ಕೇಸರಿಗಳು (ಚೆಡ್ಡಿಗಳು ಅಂತ ಕರೆದರೆ ಸಂಸ್ಕೃತಿಗೆ ವಿರುದ್ಧವಾಗಬಹುದು!) ಸ್ವದೇಶೀ ಸೋಪಿನಲ್ಲಿ ಸ್ನಾನ ಮಾಡುತ್ತಿದ್ದಾರೆ! ಕೆರೆ ನೀರು ಕೊಳಕಾಗುತ್ತಿದೆ!
ಕುಂವೀ ಆ ಹೇಳಿಕೆ ನೀಡಿದ ತಕ್ಷಣ ಸ್ವತಃ ಅವರ ಬಗ್ಗೆಯೂ ಗೊತ್ತಿಲ್ಲದ ಹಲವರು ತಮ್ಮಷ್ಟಕ್ಕೇ 'ಜೈ' ಅಂದರು! ಕಾರಣ ಹೇಳಿಕೆ ಅನಂತಮೂರ್ತಿಯವರ ವಿರುದ್ಧವಾಗಿತ್ತು. ನನ್ನ ಹಲವು ಮಿತ್ರರು ಕೂಡ 'ಅನಂತಮೂರ್ತಿ ಬಿದ್ದ ನೋಡು!' ಎಂದು ಚಪ್ಪಾಳೆ ತಟ್ಟಿದರು! ಆದ್ದರಿಂದ ನನಗೂ ಪ್ರತಿಕ್ರಯಿಸಲೇಬೇಕಾಯಿತು.
ಒಪ್ಪುತೇನೆ...ಕಾರಂತರು,ಅನಂತಮೂರ್ತಿ,ಲಂಕೇಶ್ ಮತ್ತು ತೇಜಸ್ವಿ ಈ ನಾಲ್ಕು ಜನರ ವಿರುದ್ಢವಾಗಿ ಯಾರು ಏನೇ ಹೇಳಿದರೂ ಸಹಿಸಿಕೊಳ್ಳೋದು ಕಷ್ಟ. ಕನ್ನಡ ಸಾಹಿತ್ಯವನ್ನ ಯಾವತ್ತೂ ಎಚ್ಚರವಾಗಿಡುವವರು ಇವರು. ಹಾಗೆಂದ ಮಾತ್ರಕ್ಕೆ ಉಳಿದವರು ಸಾಹಿತಿಗಳಲ್ಲ ಎಂದಲ್ಲ. ಇವತ್ತಿಗೂ ನನ್ನ ನೆಚ್ಚಿನ ಕವಿ ರಾಮಾನುಜನ್ ಮತ್ತು ನೆಚ್ಚಿನ ಕವನ ವಿ.ಜಿ.ಭಟ್ಟರ 'ಆತ್ಮಶೋಧನೆ'. ಆದರೆ ಈ ನಾಲ್ಕು ಜನರಂತೆ ಉಳಿದವರು ದಿನದ ಒಂದು ಭಾಗ ಅನ್ನಿಸುವುದಿಲ್ಲ,ಯಾಕೋ ಅಷ್ಟು ಹತ್ತಿರವಾಗುವುದಿಲ್ಲ.
ಮಾಧ್ಯಮಗಳ,ಅದರಲ್ಲೂ ಪತ್ರಿಕೆಗಳ ಅಪಕ್ವತೆಯನ್ನ ಕಂಡಾಗ ಲಂಕೇಶ್ ನೆನಪಾಗುತ್ತಾರೆ. ಅರ್ಥವಾಗದ ಸಂಸ್ಕೃತ ಶ್ಲೋಕವನ್ನ ಮುಸ್ಸಂಜೆ ಯಾರಾದರೂ ಹೇಳುವುದು ಕೇಳಿದ ತಕ್ಷಣ 'ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಕಿಲ್ಲ' ಎಂಬ ಸಾಲು ನೆನಪಾಗುತ್ತದೆ. ಕೆಲಸಕ್ಕೆ ಬರುವ ಗಿಡ್ಡನನ್ನೋ,ಬೀರಪ್ಪನನ್ನೋ ಕಂಡ ತಕ್ಷಣ ತೇಜಸ್ವಿ ಮತ್ತವರ ಪಾತ್ರಗಳು ಕಣ್ಣ ಮುಂದೆ ಬರುತ್ತಾರೆ. ಬೆಟ್ಟ ಕಡಿದು ತೋಟ ಮಾಡಿದ ಸಣ್ಣಜ್ಜನ ಸುದ್ದಿ ಹೇಳುವಾಗ ಕಾರಂತರ 'ಬೆಟ್ಟದ ಜೀವ' ನೆನಪಾಗುತ್ತದೆ. ದಕ್ಷಿಣೆಗೆ ಬಾಯಿಬಿಡುವ,ದೇವಸ್ಥಾನದಲ್ಲಿಯೇ ಹೊಡೆದಾಡುವ ವೈದಿಕರನ್ನ ಕಂಡಾಗ 'ಸಂಸ್ಕಾರ' ನೆನಪಾಗುತ್ತದೆ. ಬಹುಶಃ ಪ್ರತಿಯೊಬ್ಬ ಸಾಹಿತ್ಯಪ್ರಿಯನಿಗೂ ತನ್ನ ನೆಚ್ಚಿನ ಲೇಖಕ,ಕೃತಿ ಹೀಗೇ ನೆನಪಾಗಬಹುದು. ಆದರೆ ಈ ನಾಲ್ಕು ಜನರ ಪ್ರಭಾವ ಇಲ್ಲಿಗೇ ಮುಗಿಯುವುದಿಲ್ಲ!
ತೇಜಸ್ವಿ ಮತ್ತು ಕಾರಂತರು ಬದುಕಾದರೆ ಉಳಿದ ಇಬ್ಬರು ವಿಮರ್ಶೆ. ವಾಸ್ತವಕ್ಕೆ ಅನಂತಮೂರ್ತಿ ಮತ್ತು ಲಂಕೇಶ್ ಪ್ರತಿಕ್ರಯಿಸಿದಷ್ಟು ತೀವ್ರವಾಗಿ,ಸಮಂಜಸವಾಗಿ,ನಿಷ್ಠುರವಾಗಿ ಯಾರೂ ಪ್ರತಿಕ್ರಿಯೆ ನೀಡಿರಲಿಕ್ಕಿಲ್ಲ. ಇದೇ ಕಾರಣಕ್ಕಾಗಿ 'ಸಮಾಜದ ಸಮಸ್ಯೆ ಬಗೆಹರಿಸುವುದು ನಮ್ಮ ಕೆಲಸವಲ್ಲ' ಎನ್ನುವವರಿಗಿಂತ,ಮೌಲ್ಯವಾದಿಗಳಿಗಿಂತ ಇವರು ಹತ್ತಿರವಾಗುವುದು.ಇವತ್ತು ಮೋದಿಯೆನ್ನುವ ಕಾರ್ಪೋರೇಟ್ ರಾಕ್ಷಸನ ಸಾಹಸಗಳ ಬಗ್ಗೆ ಯಾರಾದರೂ ಮಾತಾಡುತ್ತಿದ್ದರೆ ಅದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಂಕೇಶ್ ಮತ್ತು ಅನಂತಮೂರ್ತಿಯವರ ಕಾರಣದಿಂದ! ಇಲ್ಲಿ ಈ ಇಬ್ಬರು ಕೇವಲ ವ್ಯಕ್ತಿ ಅಥವಾ ಸಾಹಿತಿಗಳಾಗಿ ಉಳಿದಿಲ್ಲ,ಬದಲಾಗಿ ಒಂದು ಆಲೋಚನಾ ಮಾರ್ಗವಾಗಿದ್ದಾರೆ. ಸನಾತನಿಗಳು,ಸುಸಂಸ್ಕೃತರು ಎಷ್ಟೇ ಬೋಬ್ಬಿಟ್ಟರೂ,ಧಿಕ್ಕಾರ ಕೂಗಿಕೊಂಡರೂ,ಶಾಸ್ತಿ-ಶಾಂತಿ ಮಾಡಿದರೂ,ವಿವಾದಗಳು ಸೃಷ್ಟಿಯಾದರೂ ಮರೆಯಾಗದ ಜಾಗೃತ ಸ್ಥಿತಿ ಅದು.
ಲೇಖಕನೊಬ್ಬನ ಬಗ್ಗೆ ಪ್ರತಿಯೊಬ್ಬನಿಗೂ ಬೇರೆ ಬೇರೆ ರೀತಿಯ ಧೋರಣೆಗಳಿರುತ್ತವೆ. ನನಗೆ ಬೇಂದ್ರೆ ಅರ್ಥವಾಗುವುದಿಲ್ಲ,ಅಡಿಗರು ಕ್ಲಿಷ್ಟವೆನಿಸುತ್ತಾರೆ,'ಕವಲು' ಕೆಟ್ಟದಾಗಿ ಕಾಣುತ್ತದೆ,ಡುಂಡಿರಾಜ್ ಅಷ್ಟೊಂದು ಇಷ್ಟವಾಗುವುದಿಲ್ಲ,ಎಚ್.ಎಸ್.ವೆಂಕಟೇಶಮೂರ್ತಿಯಂಥವರು ಕೇಳಲು ಇಂಪಾದರೂ ಅವರನ್ನು ಓದಲು ಸಾಧ್ಯವಾಗುವುದಿಲ್ಲ,ಸಿದ್ಧಲಿಂಗಯ್ಯನವರನ್ನ ಕಂಡಾಗ ಬೇಜಾರಾಗುತ್ತದೆ,ಕಾರ್ನಾಡರು ತುಂಬಾ ಮಾಡರ್ನ್ ಆಗಿಬಿಟ್ಟರೇನೋ ಅನ್ನಿಸಿಬಿಡುತ್ತದೆ...ಆದರೆ ಇದ್ಯಾವುದೂ ಒಬ್ಬ ಓದುಗನನ್ನ 'ಕೆಣಕುವುದಿಲ್ಲ' ಮತ್ತು ಇದರಲ್ಲಿ ಓದುಗನ ನ್ಯೂನತೆಯೂ ಇರಬಹುದು. (ಏಕೆಂದರೆ ಈ ಲೇಖಕರು ಹಲವರಿಗೆ ಇಷ್ಟವಾಗುತ್ತಾರೆ) ಹಾಗೆಂದ ಮಾತ್ರಕ್ಕೆ ಡುಂಡಿರಾಜ್ ರನ್ನೋ,ವೆಂಕಟೇಶಮೂರ್ತಿಯವರನ್ನೋ ತೆಗಳಬೇಕು,ಯಾರಾದರೂ ತೆಗಳಿದರೆ ಚಪ್ಪಾಳೆ ತಟ್ಟಬೇಕು ಎಂದಲ್ಲ.  ಅನಂತಮೂರ್ತಿಯವರು ಆಳ್ವಾಸ್ ನುಡಿಸಿರಿಯ ಉದ್ಘಾಟಕರಾದಾಗ ಹಲವರು ಆಕ್ಷೇಪಿಸಿದ್ದನ್ನು,ಬರಗೂರರ ಪಾಲ್ಗೊಳ್ಳುವಿಕೆಯನ್ನು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಳೆದ ತಿಂಗಳು ಧಾರವಾಡದಲ್ಲಿ ನಡೆದ 'ಸಾಹಿತ್ಯ ಸಂಭ್ರಮ'ವನ್ನೂ ಹಲವರು ಆಕ್ಷೇಪಿಸಿದ್ದರು. ಇಂಥ ಆಕ್ಷೇಪಗಳು ಸಾಹಿತ್ಯ ವಲಯದಲ್ಲಿ ಯಾವತ್ತಿನಿಂದಲೂ ಇವೆ ಮತ್ತು ಇರಬೇಕು ಕೂಡ. ಇದನ್ನೇ ಜಾಗೃತ ಸ್ಥಿತಿ ಎಂದಿದ್ದು. ಎಲ್ಲದಕ್ಕೂ ಮುಖ್ಯವಾಗಿ ಒಬ್ಬ ಲೇಖಕನ ಬಗ್ಗೆ ಮಾತನಾಡುವ ಮುನ್ನ ಆವನ ಕೆಲವು ಕೃತಿಗಳನ್ನಾದರೂ ಓದಿರಬೇಕು.ಅನಂತಮೂರ್ತಿಯವರನ್ನು ತೆಗಳುವ ಬಹುಪಾಲು ಸನಾತನಿಗಳಿಗೆ 'ಸಂಸ್ಕಾರ'ದಲ್ಲಿ ನಿಜಕ್ಕೂ ಏನಿದೆಯೆಂದು ಗೊತ್ತಿಲ್ಲ,'ಸೂರ್ಯನ ಕುದುರೆ'ಯಂಥ ಕಥೆಯ ಹೆಸರನ್ನೂ ಕೇಳಿಲ್ಲ,'ಪ್ರಜ್ನೆ ಮತ್ತು ಪರಿಸರ' ಎಂಬ ಪುಸ್ತಕವಿದೆಯೆಂಬುದೇ ಗೊತ್ತಿಲ್ಲ,ಇನ್ನು ಬ್ರೆಕ್ಟ್,ಯೇಟ್ಸ್,ಬ್ಲೇಕ್ ಮುಂತಾದವರ ಕವಿತೆಗಳ ಅನುವಾದ,ವಿಮರ್ಶೆಗಳ ಮಾತು ಬೇಡ ಬಿಡಿ! ಕುಂವೀಯವರ 'ದೇವರ ಹೆಣ'ವನ್ನೂ ಸನಾತನಿಗಳು ಓದಿಲ್ಲ,ಓದಿದ್ದರೆ ‘ಗೋಹತ್ಯೆ’ಯೆಂದು ಬೊಬ್ಬೆ ಹಾಕುತ್ತಿದ್ದರೇನೋ!
ಪ್ರಶಸ್ತಿಗಳೇ ನಾನ್ಸೆನ್ಸ್ ಅನ್ನಿಸುತ್ತದೆ ಕೆಲವೊಮ್ಮೆ! ಪ್ರಶಸ್ತಿ ನೀಡುವ ಸಮಾರಂಭಗಳು,ಸಮ್ಮೇಳನಗಳಲ್ಲಿ ಆಡಂಬರ,ಊಟದ ವ್ಯವಸ್ಥೆ ಮುಖ್ಯವಾಗುತ್ತದೆಯೇ ಹೊರತು ಸಾಹಿತ್ಯವಲ್ಲ! ಪ್ರಶಸ್ತಿ ಪಡೆದ ಸಾಹಿತಿ ನಾಲ್ಕು ದಿನ ಸುದ್ದಿಯಲ್ಲಿದ್ದು ಆಮೇಲೆ ಮರೆತುಹೋಗುತ್ತಾನೆ. ಆದರೂ ಲೇಖಕನಲ್ಲಿ ಅದರಲ್ಲೂ ಹೊಸ ಲೇಖಕನೊಬ್ಬನಲ್ಲಿ ಆತ್ಮವಿಶ್ವಾಸ ತುಂಬಲು ಪ್ರಶಸ್ತಿಗಳು ಬೇಕು. ಹಾಗೆಂದ ಮಾತ್ರಕ್ಕೆ ಪ್ರಶಸ್ತಿ ಸಿಕ್ಕವರು ಉತ್ತಮ ಲೇಖಕರು,ಉಳಿದವರು ಅಲ್ಲ ಅನ್ನಲಾಗುವುದಿಲ್ಲ. ಲೇಖಕರು ಪ್ರಶಸ್ತಿಗಾಗಿ,ಪ್ರಚಾರಕಾಗಿ ಹೇಳಿಕೆ ನೀಡುತ್ತರೆನ್ನುವುದೂ ತಪ್ಪು. ಅನಂತಮೂರ್ತಿಯವರು ಪ್ರಚಾರಕ್ಕಾಗಿ ಮೋದಿ ವಿರುದ್ಧ ಹೇಳಿಕೆ ನೀಡುತ್ತಾರೆ,ಕುಂವೀಯವರು ಯಾವುದೋ ಪ್ರಶಸ್ತಿಗಾಗಿ ಲಾಬಿ ನಡೆಸುತ್ತಿದ್ದಾರೆ ಅನ್ನುವುದರಲ್ಲಿ ಅರ್ಥವಿಲ್ಲ. ತನ್ನ ಕೃತಿಯ ಗೆಲುವಿನ ಎದುರು ಪ್ರಶಸ್ತಿಗಳು,ಹೊಗಳಿಕೆಗಳು ದೊಡ್ಡದಲ್ಲ ಎಂಬ ಕನಿಷ್ಟ ಯೋಚನೆಯನ್ನೂ ಮಾಡದವ ಸಾಹಿತಿಯೆನಿಸಿಕೊಳ್ಳಲಾರ ಎಂಬುದು ನನ್ನ ನಂಬಿಕೆ. ಇನ್ನು ಅನಂತಮೂರ್ತಿ ಮತ್ತು ಕಾರ್ನಾಡ್ ಕನ್ನಡಕ್ಕಾಗಿ ಏನೂ ಮಾಡಿಲ್ಲವೆಂದು ದೂರುವ ಅವಶ್ಯಕತೆಯೂ ಇಲ್ಲ. ‘ತುಘಲಕ್’ನಂಥ ನಾಟಕವೊಂದು ಸಾಕು ಕಾರ್ನಾಡರನ್ನ ಮೆಚ್ಚಿಕೊಳ್ಳೋಕೆ. ಆರ್.ಕೆ.ನಾರಾಯಣ್ ವಿಷಯದಲ್ಲೂ ಇಂಥ ವಿವಾದವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇವರೆಲ್ಲ ನಮ್ಮವರೆಂಬುದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ ಮತ್ತು ಅವರು ನಮ್ಮವರೆಂದುಕೊಳ್ಳುವಷ್ಟು ಉದಾರ ಮನೋಭಾವ ಅತ್ಯಗತ್ಯ ಕೂಡ.ಸಾಹಿತ್ಯವೆಂದರೆ ಹೇಗೆ ಕೇವಲ ಕಥೆ ಅಥವಾ ಕವನವಲ್ಲವೋ ಹಾಗೆಯೇ ಸಾಹಿತ್ಯವೆಂದರೆ ಕೇವಲ ಕುವೆಂಪು ಅಥವಾ ಕುಮಾರವ್ಯಾಸನಲ್ಲ. ಇವತ್ತಿನ ಸಿದ್ಧಲಿಂಗಯ್ಯನವರನ್ನು ನೋಡಿ ಕನ್ನಡ ಸಾಹಿತ್ಯವಲ್ಲಿ ಅವರ ಕವಿತೆಗಳಿಗಿರುವ ಮಹತ್ವವನ್ನು ಅಲ್ಲಗಳೆಯಲಾಗುವುದಿಲ್ಲ. ಈ ಹೇಳಿಕೆ ನೀಡಿದರೆಂಬ ಕಾರಣಕ್ಕಾಗಿ ಕುಂವೀಯವರ ಮೇಲಿನ ಗೌರವವೂ ಕಡಿಮೆಯಾಗುವುದಿಲ್ಲ.ಆದರೆ ಸಾಮಾನ್ಯ ಜನರಿಂದ ಈಗಾಗಲೇ ದೂರವಾಗುತ್ತಿರುವ ಸಾಹಿತಿಗಳು ಒಳಜಗಳ,ಭಿನ್ನಭಿಪ್ರಾಯಗಳಿಂದ ನಗೆಪಾಟಲಿಗೀಡಾಗಬಾರದು ಅಷ್ಟೇ. ಕೈಗಾರಿಕೀಕರಣ,ಜಾತೀವಾದ,ಕೋಮುವಾದ,ಭ್ರಷ್ಟಾಚಾರ,ಆಂಗ್ಲಮಾಧ್ಯಮ ಶಾಲೆಗಳ ಹಾವಳಿ ಹೀಗೆ ಸಾಹಿತಿಗಳು,ಬುದ್ಧಿಜೀವಿಗಳು ಆಲೋಚಿಸಬೇಕಾದ ಹಲವಾರು ವಿಚಾರಗಳಿರುವಾಗ ಪ್ರಶಸ್ತಿಯ ವಿಚಾರದಲ್ಲಿ ತಾವೇ ವಿವಾದಕ್ಕೀಡಾಗುವುದು ಖಂಡಿತ ಉತ್ತಮ ಬೆಳವಣಿಗೆಯಲ್ಲ.
ಇನ್ನು ಇವತ್ತಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಗೊತ್ತಿರುವುದು ಅಷ್ಟರಲ್ಲೇ ಇದೆ. ಪ್ರಶಸ್ತಿ ಪಡೆದ ಲೇಖಕರ ಹೆಸರು ಗೊತ್ತಿರಬಹುದು ಆದರೆ ಅವರ ಕೃತಿಗಳನ್ನ ಎಷ್ಟು ಮಕ್ಕಳು ಓದುತ್ತಾರೆ? ಸಾಹಿತ್ಯದ ಬದಲು ಧರ್ಮ ಗ್ರಂಥಗಳನ್ನ ಓದಿಸುತ್ತಿರುವ,ಓದಿಸಲು ಹೊರಟಿರುವ ಕಾಲ ಇದು! ಸಾಹಿತ್ಯ ಅಂದರೆ ಸಿನೆಮಾ ಹಾಡು,ಕನ್ನಡಾಭಿಮಾನ ಅಂದರೆ ನವೆಂಬರಿನಲ್ಲಿ ಬಾವುಟ ಹಾರಿಸುವುದು ಎಂದುಕೊಂಡವರೂ ಇದ್ದಾರೆ.ಪ್ರಾಥಮಿಕ ಹಂತದಲ್ಲಿಯೇ ವರ್ಷಕ್ಕೆ ೩೦-೪೦ ಸಾವಿರ ಸುಲಿಗೆ ಮಾಡುವ ಕಾನ್ಮೆಂಟುಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರರಂತೆ ಪ್ರಶಸ್ತಿ ವಿಜೇತ ಸಾಹಿತಿಗಳು ಕೂಡ ಫೋಟೋಕ್ಕಷ್ಟೇ ಸೀಮಿತವಾಗಿದ್ದಾರೆ! ವರ್ಷಕ್ಕೊಮ್ಮೆ ವಾರ್ಷಿಕೋತ್ಸವದಲ್ಲಿ ‘ಹಚ್ಚೇವು ಕನ್ನಡದ ದೀಪ’ ಎನ್ನುವಷ್ಟು ಕನ್ನಡವೂ ಉಳಿದಿಲ್ಲ ಕೆಲವು ಶಾಲೆಗಳಲ್ಲಿ. ಯುನಿವರ್ಸಿಟಿಗಳಲ್ಲಿ ಸಾಹಿತ್ಯವನ್ನು ಅಭ್ಯಾಸ ಮಾಡುವವರು ಕೂಡ ಲೈಬ್ರರಿಯಲ್ಲಿ ಆರಿಸಿಕೊಳ್ಳುವುದು ರಾಬಿನ್ ಶರ್ಮ,ಚೇತನ್ ಭಗತ್,ಶೋಭಾ ಡೇ ಮುಂತಾದವರನ್ನೇ ಹೊರತು ಚಿತ್ತಾಲರು ಅಥವಾ ಕಾರಂತರನ್ನಲ್ಲ. ಇಷ್ಟರ ಮಧ್ಯೆಯೂ ಒಬ್ಬ ಹೊಸ ಓದುಗ ಅಪ್ಪಿತಪ್ಪಿ ಕನ್ನಡ ಸಾಹಿತ್ಯದ ಗೀಳು ಹತ್ತಿಸಿಕೊಂಡರೆ ಅದಕ್ಕೆ ಕಾರಣ ತೇಜಸ್ವಿಯಂಥವರು. ಪ್ರಶಸ್ತಿ ಪಡೆಯದಿದ್ದರೂ ಎಲ್ಲ ವಯೋಮಾನದವರಿಗೆ ಓದುವ ಗೀಳು ಹತ್ತಿಸಬಲ್ಲ ಲೇಖಕರು ಇವರು. ಒಮ್ಮೆ ಸಾಹಿತ್ಯದ ಹುಚ್ಚು ಹಿಡಿದವನು ಹೊಸ ಪುಸ್ತಕ ಓದುವಾಗ ಅದನ್ನು ಬರೆದವನಿಗೆ ಪ್ರಶಸ್ತಿ ಬಂದಿದೆಯೋ ಇಲ್ಲವೋ ಎಂದು ಯೋಚಿಸುವುದಿಲ್ಲವೆಂದು ನನಗನ್ನಿಸುತ್ತದೆ.
ಅಂದಹಾಗೆ ಇಂಥ ಸಂದರ್ಭದಲ್ಲಿ ಚಪ್ಪಾಳೆ ತಟ್ಟಿ ನಗುವಾಗ ಮನಸ್ಸಿನಲ್ಲಿಯೇ ಗೊಣಗಿಕೊಳ್ಳೋಕೆ ಯಾರಿಗೂ ಅರ್ಥವಾಗದ ಶ್ಲೋಕ ಇರಬೇಕಿತ್ತೆಂದು ಯುವ ಕೇಸರಿಯೊಬ್ಬನಿಗೆ ಅನ್ನಿಸಿ ಗೂಗಲ್ಲಿನಲ್ಲಿ ವೇದದ ತುಣುಕುಗಳನ್ನು ಹುಡುಕಿದನಂತೆ!

1 comment:

  1. ತುಂಬ ವಿಸ್ತಾರವಾಗಿ, ಅರ್ಥಪೂರ್ಣವಾಗಿ ನಿಮ್ಮ ವಿಚಾರಗಳನ್ನು ಮಂಡಿಸಿದ್ದೀರಿ, ಚಿನ್ಮಯ. ನಿಮ್ಮ ಜೊತೆಗೆ ನಾನು ಪೂರ್ಣ ಸಹಮತಿಯನ್ನು ಹೊಂದಿರದಿದ್ದರೂ ಸಹ, ನಿಮ್ಮ ವೈಖರಿಯನ್ನು ಮೆಚ್ಚಿಕೊಳ್ಳುತ್ತೇನೆ.

    ReplyDelete