ಬ್ರೆಕ್ಟನಿಗೆ
ನಿನ್ನನ್ನು ಮತ್ತೆ ಮತ್ತೆ ಓದುತ್ತಿದ್ದೇನೆ ಬ್ರೆಕ್ಟ್,
ನಿನ್ನ ಬಾಯಲ್ಲಿ ರಾರಾಜಿಸುತ್ತಿದ್ದ ಸಿಗಾರಿನಂತೆ
ನನ್ನ ಮಡಿವಂತಿಕೆ,ಸಂಕುಚಿತತೆ ಉರಿಯತೊಡಗಿದವು
ಬಿಳಿಯ ಹಾಳೆಯ ಮೇಲೆಲ್ಲಾ ಬೂದಿ ಚೆಲ್ಲಾಡಿತು!
ನಿನಗೆ ಅಶ್ಲೀಲವೆನಿಸಿದ್ದ,ನನಗೆ ಸಾಮಾನ್ಯವಾಗಿದ್ದ
ಪ್ರಾಸಗಳು ದಿಕ್ಕಾಪಾಲಾದವು ಬ್ರೆಕ್ಟ್,
ಒತ್ತಡದಲ್ಲಿಯೂ ಒಮ್ಮೆಲೇ ಹಗುರಾಗಿಬಿಟ್ಟೆ
ಮರುಕ್ಷಣವೇ ಮತ್ತೆ ಭಾರವಾದೆ.
ಇಂದು ಪ್ರಶ್ನೆಗಳೇ ಹುಟ್ಟುವುದಿಲ್ಲ ಬ್ರೆಕ್ಟ್,
ಉತ್ತರಗಳಿಗೆ ಇನ್ನೆಲ್ಲಿಯ ಹುಡುಕಾಟ?!
ಸಹಜ ಅಸಹಜಗಳ ವ್ಯತ್ಯಾಸ ತಿಳಿದರಲ್ಲವೇ
ದ್ವಂದ್ವದ ಮಾತು?
ನೀನು ಬೆತ್ತಲಾಗಿ ಹುಚ್ಚನಂತೆ ಅಲೆದು
ಶೋಧಿಸಿಟ್ಟ ಉತ್ತರಗಳು,ಕೇಳಿಕೊಂಡ ಪ್ರಶ್ನೆಗಳು
ಶಾಸ್ತ್ರಗಳ ಮುಂದೆ ಮಂಕಾಗಿ
ಮೂಲೆ ಸೇರಿವೆ ಅಷ್ಟೇ!
ಪ್ರಪಂಚ ಖಂಡಿತ ಬದಲಾಗುತ್ತ(ತ್ತಿ)ದೆ ಬ್ರೆಕ್ಟ್,
ವಶೀಕರಣಕ್ಕೆ ಶಿಕ್ಷಣ,ಮೈ ಮುಚ್ಚಿಕೊಳ್ಳಲು ನೀತಿ
ಸೇವೆಗೆ ಪ್ರಚಾರ,ಗಳಿಕೆಗೆ ಭ್ರಷ್ಟಾಚಾರ
ಸಂಬಂಧಕ್ಕೆ ಸೂತ್ರಗಳು,ಮುಕ್ತಿಗೆ ಸಿದ್ಧಾಂತಗಳು
ಕ್ಷಣ ಕ್ಷಣಕ್ಕೂ ನಡೆಯುತ್ತಿರುವುದು ಅಭಿ’ವೃದ್ಧಿ’ಯೇ!
ಮನೆಯಲ್ಲ ಜಗತ್ತೇ ಹೊತ್ತಿ ಉರಿಯುತ್ತಿದೆ
ಬುದ್ಧನಿಗೆ ಮಾತು ಮರೆತುಹೋಗಿದೆ.
ನಿನ್ನ ಗೊಂದಲಪುರ ಇಂದಿಗೂ ಇದೆ ಬ್ರೆಕ್ಟ್,
ಸುಣ್ಣ ಬಣ್ಣ ಬಳಿಸಿಕೊಂಡು ಅಂದಿಗಿಂತ ಚಂದವಾಗಿದೆ!
ಪಾರಂಗತರ ಸಂಧಾನ-ಸಂಭೋಗ ಎಗ್ಗಿಲ್ಲದೆ ನಡೆಯುತ್ತಿದೆ
ಶಂಖ ಜಾಗಟೆಗಳು ಮೊಳಗುತ್ತಲೇ ಇವೆ
ಬಡಕಲು ಮೈಯ ಸೂಳೆ ಸ್ಮಶಾನದಲ್ಲಿ ಬಿಕ್ಕುತ್ತಿದ್ದಾಳೆ
ಲೆಕ್ಕ ಸಿಗದಷ್ಟು ‘ಮಕ್ಕಳು’ ಹುಟ್ಟುತ್ತಲೇ ಇದ್ದಾರೆ
ಆಕ್ರಂದನ ಮುಗಿಲು ಮುಟ್ಟಿದೆ
ತಂಪು ಕೋಣೆಯ ಕಿವಿಗಳನ್ನಲ್ಲ ಅಷ್ಟೇ!
ಹೊಸ ಯುಗ,ಹೊಸ ಪ್ರಭೆ
ಕವಿತೆ,ದೇಶ,ಕಾಲ
ಸ್ವಾತಂತ್ರ್ಯ,ಕನಸು,ಗೆಲುವು…
ನನಗೆ ಭರವಸೆತಿಲ್ಲ ಬ್ರೆಕ್ಟ್,
ಎದೆ ಬಡಿದುಕೊಳ್ಳಲೂ ಹೆದರುತ್ತದೆ
ಉಸಿರು ಯಾರದೋ ಅಪ್ಪಣೆಗೆ ಕಾಯುತ್ತದೆ
ಸೋತ ಕವಿತೆ ನನ್ನನ್ನೇ ಕೊಲ್ಲುತ್ತದೆ.
ಉಟ್ಟ ಬಟ್ಟೆಯಲ್ಲೇ ಎದ್ದು ನಡೆಯೋಣವೆಂದರೆ
ಪ್ರೀತಿ,ಕರ್ತವ್ಯ,ಸ್ವಾರ್ಥ ತಡೆಯುತ್ತವೆ,
ಅಕ್ಷರಗಳು ಮತ್ತೆ ಬಿಕ್ಕುತ್ತವೆ…
ಇಷ್ಟಾದರೂ ನೀನೇ ಸರ್ವಶ್ರೇಷ್ಠನೆಂದು
ನಾ ಒಪ್ಪಲಾರೆ ಬ್ರೆಕ್ಟ್,
ನೀನು ಕೇವಲ ಒಬ್ಬ ಹಿಟ್ಲರನನ್ನು ಕಂಡಿರಬಹುದು
ಆದರೆ ನಾನು
ಹಿಟ್ಲರರ ನಡುವೆ ಬದುಕುತ್ತಿದ್ದೇನೆ!!!
( ಆಗಸ್ಟ್ 2010 )