September 9, 2016

ನಾ ಅನುವಾದಿಸಿದ ಟಿ ಎಂ ಕೃಷ್ಣರವರ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಭಾಷಣ

ನಾನೊಬ್ಬ ಸಂಗೀತಗಾರ, ಭಾರತದ ಸುಪ್ರಸಿದ್ಧ ಸಂಗೀತ ಪ್ರಕಾರಗಳಲ್ಲೊಂದಾದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನ ಅಭ್ಯಾಸ ಮಾಡೋನು, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದೋನು. ನನಗೆ ತಿಳುವಳಿಕೆ ಬಂದಾಗಿನಿಂದಲೂ ಈ ಸಂಗೀತ ಜಗತ್ತಿನ ಭಾಗವಾಗಿಯೇ ನನ್ನನ್ನ ನಾನು ಗುರುತಿಸಿಕೊಂಡವನು. ಹಲವಾರು ಬ್ಯಾಹ್ಮಣರಂತೆ ಈ ಸಂಗೀತವನ್ನ ಚಿಕ್ಕ ವಯಸ್ಸಿನಿಂದಲೂ ಅಭ್ಯಾಸ ಮಾಡುತ್ತಾ ಬಂದು 22ನೇ ವಯಸ್ಸಿಗೆ ಕೇವಲ ಯಶಸ್ಸನ್ನೇ ಗುರಿಯಾಗಿಸಿಕೊಂಡು ವೃತ್ತಿ ಆರಂಭಿಸಿದವನು‌. ಒಂದಷ್ಟು ಅಸಹಜ ಘಟನೆಗಳು,ಸಂದರ್ಭಗಳು ನನ್ನನ್ನು ಸಂಗೀತವನ್ನ ಕಲಿಯೋದು, ಹಾಡೋದನ್ನು ಹೊರತುಪಡಿಸಿ ಅದರಾಚೆಗೂ ಹರಡಿರಬಹುದಾದ ಸಂಗೀತದ ಬದುಕನ್ನು ಶೋಧಿಸುವಂತೆ ಮಾಡಿದವು.
ಹಾಗಾದರೆ ಈ ಸಂಗೀತ ಅಂದರೆ ಏನು? ಅಂದರೆ ಅದರ ಇತಿಹಾಸ, ಉದ್ದೇಶ?
ಪ್ರಶ್ನೆಗಳು ಶುರುವಾದಂತೆ ಅದು ನನ್ನನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ನಾನ್ಯಾರು? ಸಮಾಜದಲ್ಲಿ ನಾನು ಎಲ್ಲಿ ನಿಂತಿದ್ದೇನೆ? ನನ್ನ ಸಂಗೀತ ಕೇಳಿ ಪ್ರತಿ ಘಳಿಗೆಯನ್ನೂ ಆಸ್ವಾದಿಸಿ ಚಪ್ಪಾಳೆ ತಟ್ಟುವ ಜನ ಯಾರು? ಬರಬರುತ್ತಾ ಸಂಗೀತ ಅನ್ನೋದು ಕೇವಲ ಲಯ ಮತ್ತು ಮಾಧುರ್ಯವಲ್ಲ, ಬದಲಿಗೆ ಅದು ಮೇಲ್ಜಾತಿಯವರ ಧರ್ಮ, ಶಾಸ್ತ್ರ, ಆಚಾರಗಳನ್ನ ಒಳಗೊಂಡಿದೆ, ನನ್ನ ಜಾತಿಯನ್ನು ನಮ್ಮದೆಂದು ಆಚರಿಸುತ್ತಾ, ಸಂರಕ್ಷಿಸುತ್ತಾ, ಕಾಪಾಡಿಕೊಳ್ಳುತ್ತಾ ನನ್ನದಲ್ಲದ ಜಾತಿಯನ್ನು ಅಂದರೆ ಭಾರತದ ಜಾತಿ ವ್ಯವಸ್ಥೆಯ ತಳಮಟ್ಟದಲ್ಲಿರುವವರನ್ನು ನನ್ನದರಿಂದ ಸಂಪೂರ್ಣವಾಗಿ ವಂಚಿತರನ್ನಾಗಿಸುವ ವಿಧಾನ ಇದು ಅನ್ನಿಸತೊಡಗಿತು.
ಒಂದು ಅಮೂಲ್ಯವಾದ, ರಸಾಸ್ವಾದದ ಅನುಭವ ಕೂಡ ರಾಜಕೀಯ ಮತ್ತು ಸಾಮಾಜಿಕ ಟೀಕೆ-ಟಿಪ್ಪಣಿಯ ಭಾಗವಾಗಬಹುದು. ಇದು ತಪ್ಪು ಎಂದು ನನಗೆ ಸ್ಪಷ್ಟವಾಗಿ ಅನ್ನಿಸಿತು. ಇದು ಸಮಾಜ ಮತ್ತು ಕಲೆ ಎರಡಕ್ಕೂ ಆಗಬಹುದಾದ ಮೋಸ. ಆದ್ದರಿಂದ ಈ ಸ್ಥಾಪಿತ ನಿಯಮವನ್ನ ವಿರೋಧಿಸಬೇಕು ಎಂದು ಅಂದುಕೊಂಡೆ.
ಮೇಲ್ಜಾತಿಗೆ ಸೇರಿದವನಾಗಿದ್ದುದು ನನ್ನ ಈ ಕೆಲಸವನ್ನು ಸುಲಭವಾಗಿಸಿತು. ನನ್ನ ಜೀವನದ ಭಾಗವೇ ಆಗಿದ್ದ ಕಲೆಯನ್ನ ಪ್ರಬಲ ಭಾರತೀಯ ಸಂಸ್ಕೃತಿಯ ಭಾಗವನ್ನಾಗಿ ನೋಡಲಾಗುತ್ತಿತ್ತು. ಮತ್ತೊಂದನ್ನು ಆಳುವ ಸಂಸ್ಕೃತಿ ತನ್ನನ್ನ ತಾನೇ ಬಲಿಷ್ಠನೆಂದು ಕರೆದುಕೊಳ್ಳಬಹುದು, ಆದರೆ ಅದು ತನ್ನನ್ನು ಸಂಸ್ಕೃತಿಯೆಂದು ಕರೆದುಕೊಳ್ಳಲು ಸಾಧ್ಯವಿಲ್ಲ. ತೀರಾ ಕಡೆಗಣಿಸಲ್ಪಟ್ಟ ಜಾತಿಗೂ ತನ್ನದೇ ಆದ ಮಹತ್ವದ ಕಲೆ ಅನ್ನುವುದಿರುತ್ತದೆ ಮತ್ತು ಇದೇ ಇಲ್ಲಿನ ವಿವಿಧತೆಯನ್ನು ಪ್ರತಿಬಿಂಬಿಸುತ್ತದೆ. ಆಧಿಕಾರ ಎಂಬುದಕ್ಕೆ ಎತ್ತೆತ್ತರದ ಕೋಟೆಗಳಿರಬಹುದು, ಆದರೆ ಸಂಸ್ಕೃತಿಗೆ ಸಮಾನ ರಂಗಸ್ಥಳವಿದೆ. ಎತ್ತರದ ಕೋಟೆಗಳನ್ನ ಕೆಡವಿಹಾಕಿ, ಕಡೆಗಣಿಸಲ್ಪಟ್ಟ ಕಲಾ ಪರಂಪರೆಗಳನ್ನ ರಂಗದ ಮಧ್ಯಕ್ಕೆ ಕರೆತರಬೇಕಾದ ಅಗತ್ಯವಿದೆ.
ಸಮಾಜದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಮುಕ್ತವಾಗಿ, ಗೌರವಯುತವಾಗಿ, ಪ್ರೀತಿಪೂರ್ವಕವಾಗಿ ಎಲ್ಲರಿಗೂ ಸಮಾನವಾಗಿ ದೊರಕಬೇಕೆಂದು ಗಣತಂತ್ರ ವ್ಯವಸ್ಥೆ ಹೇಳುತ್ತದೆ. ಇದು ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಒಬ್ಬರನ್ನೊಬ್ಬರು ಒಳಗೊಳ್ಳುವ,ಒಪ್ಪಿಕೊಳ್ಳುವ ಮನೋಭಾವನೆಯನ್ನು ಬೆಳೆಸುತ್ತದೆ.
ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ. ಸಂಕೀರ್ಣವಾದ ಆದರೆ ಅಷ್ಟೇ ಸುಂದರವಾದ ಈ ಭೂಮಿಯ ಮೇಲೆ ಪ್ರತಿಯೊಬ್ಬನ  ಸುಖ-ದುಃಖಗಳೂ ಒಂದೇ ತೆರನಾದುದು ಎಂದು ಜಗತ್ತಿಗೆ ತಿಳಿಸಿಕೊಟ್ಟಿದ್ದೇ ಕಲೆ. ಆದರೆ ಈ ಏಕತೆ ನಿಜಕ್ಕೂ ಅನುಭವಕ್ಕೆ ದೊರಕುವಂತಾಗಬೇಕೆಂದರೆ ನಾವು ಕಲಾ ಪರಂಪರೆಯನ್ನು ಸಮಾಜದ ರಾಜಕೀಯ ವ್ಯವಸ್ಥೆಯಿಂದ ಬೇರ್ಪಡಿಸಬೇಕಾಗಿದೆ .
ಈ ದಿಶೆಯಲ್ಲಿ ನನ್ನ ಪ್ರಯಾಣ ಈಗಷ್ಟೇ ಆರಂಭವಾಗಿದೆ ಮತ್ತು ಎಚ್ಚರಿಕೆಯನ್ನು ಕಾಪಾಡಿಕೊಳ್ಳುತ್ತ ನಿರಂತರ ಕಲಿಕೆಯೊಂದಿಗೆ ಮುಂದುವರಿಯಲಿದೆ. ಕಲೆ ಯಾವುದೇ ನಿಬಂದನೆಗಳಿಲ್ಲದೆ ಜೀವನಕ್ಕೆ ಅಂಟಿಕೊಂಡಿದೆಯೆಂಬುದನ್ನು ಈ ಪ್ರಶಸ್ತಿ ನನಗೆ ಮತ್ತೊಮ್ಮೆ ಖಾತ್ರಿಪಡಿಸಿದೆ. ನನ್ನ ಹಲವಾರು ಸಹ ಪ್ರಯಾಣಿಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹವಿಲ್ಲದಿದ್ದರೆ ಇಲ್ಲಿಗೆ ಬಂದು ನಿಲ್ಲಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಇದು ನನ್ನ ಹೆಸರಿಗೆ ಬಂದ ಪ್ರಶಸ್ತಿಯಿರಬಹುದು ಆದರೆ ಇತರರಂತೆ ನನ್ನನ್ನೂ ತನ್ನ ಭವ್ಯತೆಯನ್ನು ಅನುಭವಿಸುವುದಕ್ಕಾಗಿ ಬೆಳೆಸಿ ಮುನ್ನಡೆಸುವುದರ ಜೊತೆಗೇ ಬದುಕಿನ ಭವ್ಯತೆಯನ್ನು ಅನುಭವಿಸಲು ಅಸಂಖ್ಯಾತ ಬಾಗಿಲುಗಳನ್ನು ತೆರೆದಿಟ್ಟ ಉದಾತ್ತವಾದ ಸಂಗೀತ ಪರಂಪರೆಗೆ ಈ ಪ್ರಶಸ್ತಿ ಸಲ್ಲುತ್ತದೆ.
ಕರ್ನಾಟಕ ಸಂಗೀತದ ಹಾಡೊಂದರ ಕೆಲ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. ಆ ಹಾಡಿನ ಕುರಿತು ಒಂದಿಷ್ಟು.
ಹತ್ತೊಂಭತ್ತನೇ ಶತಮಾನದಲ್ಲಿ ತಮಿಳಿನ ಸಂಯೋಜಕರಾದ ಗೋಪಾಲಕೃಷ್ಣ ಭಾರತಿಯವರು ದಲಿತ ಸಂತ ನಂದನಾರ್‌ರ (6ರಿಂದ 7ನೇ ಶತಮಾನ) ಹೋರಾಟವನ್ನು ವಿವರಿಸುವ ಗೀತನಾಟಕವೊಂದನ್ನು ಸಂಯೋಜಿಸಿದರು. ನಾನೀಗ ಹಾಡಲಿರುವುದು ಆ ನಾಟಕದಿಂದ ಆಯ್ದುಕೊಂಡ ಹಾಡು. ಇದರಲ್ಲಿ ನಂದನಾರ್ ತನ್ನ ಹಾಡಿನ ಮೂಲಕ ಶಿವನನ್ನು ಸ್ತುತಿಸುವುದಕ್ಕಾಗಿ ದೇವಾಲಯದೊಳಕ್ಕೆ ಪ್ರವೇಶವನ್ನು ಬೇಡುತ್ತಾನೆ. 20ನೇ ಶತಮಾನದ ಮೊದಲ ಭಾಗದವರೆಗೂ ಹಿಂದೂ ದೇವಾಲಯಗಳಿಗೆ ದಲಿತರ ಪ್ರವೇಶ ನಿಷಿದ್ಧವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ. ಇಂದು ಇಪ್ಪತ್ತೊಂದನೇ ಶತಮಾನದಲ್ಲಿ ದಲಿತರು ಪ್ರವೇಶಿಸಲು ಅಪೇಕ್ಷಿಸುತ್ತಿರೋದು ಯಾವತ್ತೂ ಅವರದ್ದಾಗದ ದೇವಾಲಯಗಳಿಗಲ್ಲ, ಬದಲಿಗೆ ಅವಕಾಶಗಳ, ಹಕ್ಕುಗಳ ಮತ್ತು ಅಧಿಕಾರ ಹಂಚಿಕೆಯ ಉಚ್ಛಶ್ರೇಣಿಗಳಿಗೆ. ಇಂದು ನಂದನಾರರು ಬಲಿಷ್ಠರಾಗಿದ್ದಾರೆ, ಒಗ್ಗೂಡಿಕೊಂಡಿದ್ದಾರೆ, ತಮ್ಮ ಹಕ್ಕುಗಳ ಕುರಿತು ಅರಿವುಳ್ಳವರಾಗಿದ್ದಾರೆ ಮತ್ತು ಇನ್ನಷ್ಟು ಬಲಿಷ್ಠರಾಗಲು,ಪರಿಣಾಮಕಾರಿಯಾಗಲು ಹೊರಟಿದ್ದಾರೆ. ಜಗತ್ತಿನಾದ್ಯಂತ ಕಡೆಗಣಿಸಲ್ಪಟ್ಟ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಕ್ಕುಗಳನ್ನೂ ಒಳಗೊಂಡತೆ ಸಮಾನವಾಗಿ ಗೌರವಯುತವಾಗಿ ಬದುಕುವ ಹಕ್ಕನ್ನು ಒದಗಿಸಲು ನಡೆಯುವ ಹೋರಾಟಗಳಿಗೆ ಇಂದಿಗೂ ಎದುರಾಗುವುದು ಮುಚ್ಚಿದ ಬಾಗಿಲುಗಳೇ.
ವರುಗಲಾಮೋ ಅಯ್ಯಾ…

June 11, 2014

ನಿನ್ನ
ಹುಡುಕ ಹೊರಟಾಗ
ಅವಳು ಕಂಡು
ಕೆಲಸ ಕೆಟ್ಟಿತು!

(ಶೀರ್ಷಿಕೆ : ದೇವರಿಗೆ!!!)
ಅವನು ಕಾಣದಿರುವುದು
ನನ್ನದೇ ದೌರ್ಬಲ್ಯ
ಅಂದುಕೊಂಡರೂ
'ಸರ್ವಶಕ್ತ'ನೆನಿಸಿದವನನ್ನು
ಅನುಮಾನಿಸುವಷ್ಟು
ಶಕ್ತಿ ಉಳಿದಿದೆ!

(ಪ್ರೇರಣೆ : 'ಪ್ರವಾಹಣ',ವೋಲ್ಗಾ-ಗಂಗಾ)
ಭಕ್ತಿಗೆ ಕಾರಣವಾದವನು
ಭಯಕ್ಕೂ ಕಾರಣವಾಗಿಬಿಡುತ್ತಾನೆ
ಹೂ ಕೊಯ್ಯಿಸಿ ಮುಡಿದವನು
ಕಲ್ಲನ್ನೂ ಹೊಡೆಸಿಬಿಡುತ್ತಾನೆ
ಹುಟ್ಟಿಸಿ ಹುಲ್ಲು ಮೇಯಿಸುವವನು
ಬಂದೂಕನ್ನೂ ಕೈಗೆ ಕೊಟ್ಟುಬಿಡುತ್ತಾನೆ!
ಇಲ್ಲ,
ಇದೆಲ್ಲ ಅವನ ಇಚ್ಛಾನುಸಾರ
ನಡೆದಿರಲಿಕ್ಕಿಲ್ಲ...



ಆ ವಯಸ್ಸಿನಲ್ಲಿ ಹಾಗೆ ಮಾಡಿದ್ದು ತಪ್ಪೋ ಸರಿಯೋ ಹೇಳೋದು ಕಷ್ಟ..ಆದರೆ ಅದನ್ನು ಬರೆದುಕೊಳ್ಳೋ ಅವಶ್ಯಕತೆ ಇರಲಿಲ್ಲವೇನೋ...ಇನ್ನು ಅದನ್ನು Quote ಮಾಡೋದು,ಮಾಧ್ಯಮ ಪ್ರಚಾರ ಕೊಟ್ಟು ದೊಡ್ಡ ಸುದ್ದಿಯಾಗಿಸೋದು,ಯಾವಾಗಲೋ ಆಗಿದ್ದನ್ನು,ಬರೆದಿದ್ದನ್ನು ಈಗ ಚರ್ಚಿಸೋದು...ಇದು ದೊಡ್ಡ ದುರಂತ...

**********************************************************************************************************

".......ಮಾಡಿದ್ದಿದೆ" ಎಂಬ ಸಾಲು ಎಲ್ಲರ ಗಮನ ಸೆಳೆದು,ಆಕ್ರೋಶಕ್ಕೆ ಕಾರಣವಾಗಿ ವಿವಾದವಾಗಿಬಿಡುತ್ತದೆ. ಆದರೆ ಅದಕ್ಕಂಟಿಕೊಂಡೇ ಇರುವ ಸಾಲು ಯಾರ ಗಮನಕ್ಕೂ ಬರೋದಿಲ್ಲ(?????)
"ಭಯದಿಂದ ನಿದ್ದೆಗೆಟ್ಟ ಆ ದಿನದ ರಾತ್ರಿಗಳು ನೆನಪಾಗುತ್ತವೆ"
ಈ ಸಾಲನ್ನೂ ಸೇರಿಸಿ 'ಓದಿಕೊಂಡಿದ್ದರೆ' ಕನಿಷ್ಟ ಪಕ್ಷ ವಿವಾದದ ಪ್ರಖರತೆ ಕಡಿಮೆಯಿರುತ್ತಿತ್ತೇನೊ!!!
ವಿಷಯ ಇಷ್ಟೇ...ನಮಗೆ ಬೇಕಾದದ್ದು ವಿವಾದ,ಅದಕ್ಕಾಗಿ ನಾವು 'ಏನನ್ನು' ಬೇಕಾದರೂ ಕೆದಕಲು ತಯಾರ್!!!

URA ಅನುವಾದಿಸಿದ ಬ್ರೆಕ್ಟನ ಸಾಲು ನೆನಪಾಗುತ್ತಿದೆ...
'ನಿನ್ನ ಗೋರಿ ಮೇಲೆ
ಸತ್ತ ತಾರೀಖು
ಸತ್ತವನ ಹೆಸರು
ಅದಕ್ಕೊಂದು ಕಲ್ಲು
ಏನೂ ಬೇಡ
ಸತ್ತವನನ್ನೇ ಯಾರೆಂದು
ಪತ್ತೆ ಮಾಡಿ ಪೀಡಿಸಿಯಾರು;ಜೋಕೆ
ಇರಲೇ ಇಲ್ಲ ಎನ್ನುವ ಹಾಗೆ ಇದ್ದು ಬಿಡು.'


ನಾಲ್ಕಕ್ಷರ ಬರೆದು
ನಾಲ್ಕು ಮಾತಾಡಿದ
ಮರುಕ್ಷಣವೇ ಅವನನ್ನು
'ಆ ಪಂಥ'ಕ್ಕೆ
'ಈ ವಾದ'ಕ್ಕೆ
ಅಂಟಿಸುವವರ ಹಿರಿತನಕ್ಕೆ
ಈ ಕಿರಿಯನ ಧಿಕ್ಕಾರ!
(ಹುಂಬತನ/ಎಳಸುತನ ಅಂದುಕೊಳ್ಳಿ ಬೇಕಾದರೆ!)
ಕೇಸರಿ,ಹಸಿರು
ಸಂಸ್ಕೃತಿ,ಧರ್ಮ
ಮನುಷ್ಯನ ಸೃಷ್ಟಿಗಳು,
ಅವುಗಳನ್ನು ಆರಾಧಿಸುವುದೂ
ಮನುಷ್ಯ ಮಾತ್ರ!!!

June 7, 2014

ವರ್ಷಕ್ಕೊಮ್ಮೆ
'ವಿಶ್ವ ಪರಿಸರದಿನ',
ಈ ವರ್ಷದ್ದು ಈಗ
ಮುಗೀತು!
ಮರಳಿ ಕಾಡಿಗೆ ಹೋಗಿ
ಹಸಿ ಮಾಂಸ ತಿನ್ನೋಕಂತೂ
ಸಾಧ್ಯವಿಲ್ಲ;
ಆದರೆ
ಮನಸ್ಸು ಮಾಡಿದರೆ
ಅಜ್ಜ ಹಿಡಿದ
ನೇಗಿಲು ಹಿಡೀಬಹುದೇನೋ?!
ಅಥವಾ ಕನಿಷ್ಟ ಪಕ್ಷ
ಆ ರೀತಿ ಯೋಚಿಸಬಹುದೇನೋ?
ಕೃತಿ-ಕಾರ್ಯಕ್ಕಿಂತ ಮೊದಲು ಹುಟ್ಟಿದ್ದು
ಆಲೋಚನೆಯಂತೆ...

(ಕಾರಂತಜ್ಜನನ್ನು ಮತ್ತೊಮ್ಮೆ ಓದಬೇಕು...)