February 2, 2014

ಗೋಹತ್ಯೆ,ಗೋಕಥೆ ಮತ್ತು ಹಳಿಯಾಳದ ಹಳ್ಳಿಗಳು

ಮೊನ್ನೆ ಯಾರೋ ಹೇಳ್ತಿದ್ದರು,ಗೋ ಸಂತತಿ ನಾಶವಾಗೋಕೆ ಮುಸ್ಲೀಮರು ಕಾರಣವಂತೆ! ದನಗಳನ್ನ ಕದ್ದುಕೊಂಡು ಹೋಗಿದ್ದ ಕೆಲವು ಖದೀಮ ಮುಸ್ಲೀಮರು ಪೋಲೀಸರ ಕೈಗೆ ಸಿಕ್ಕಿಬಿದ್ದ ಸುದ್ದಿಯನ್ನ ನಾವು ಆಗಾಗ ಟೀವಿಯಲ್ಲಿ,ಪೇಪರಿನಲ್ಲಿ ನೋಡಿದರೂ ಅದರಿಂದ ಗೋ ಸಂತತಿ ನಾಶವಾಯಿತೆಂದು ನನಗನ್ನಿಸುವುದಿಲ್ಲ. ವಿಚಿತ್ರವೆಂದರೆ ಇವತ್ತು ಗೋ ಸಂತತಿ ನಾಶವಾಯಿತೆಂದು ಯಾರು ಬೊಬ್ಬೆ ಹಾಕುತ್ತಿದ್ದಾರೋ ಆ ಗೋಪ್ರಿಯರಿಂದಲೇ ದನಗಳು ಮಾಯವಾಗಿವೆಯೆಂದು ನನಗನ್ನಿಸುತ್ತದೆ!

ಆಕಳು ಪ್ರತಿನಿಧಿಸುವುದು ಕೃಷಿ ಸಂಸ್ಕೃತಿಯನ್ನ ಅಂದರೆ ಹಳ್ಳಿಗಳನ್ನ. ಹಳ್ಳಿಗಳೇ ಕಾಣಸಿಗದ ಈ ಶತಮಾನದಲ್ಲಿ ಆಕಳು ಅಪರೂಪವಾಗಿರೋದು ಆಶ್ಚರ್ಯದ ಸಂಗತಿಯೇನಲ್ಲ. ನಾನು ಚಿಕ್ಕವನಾಗಿದಾಗ ಮೂರು ಆಕಳು,ಒಂದು ಎಮ್ಮೆ ಮತ್ತು ಅವುಗಳ ಕರುಗಳಿಂದ ತುಂಬಿಕೊಂಡಿದ್ದ ನಮ್ಮನೆಯ ಕೊಟ್ಟಿಗೆ ಇವತ್ತು ಖಾಲಿಯಾಗಿದೆ. ಮೂರೂರಿನ ಮತ್ತು ಮೂರೂರಿನಂಥ ಹಳ್ಳಿಗಳಲ್ಲಿನ ಸಾವಿರಾರು ಮನೆಗಳ ಕೊಟ್ಟಿಗೆಗಳು ಕೂಡ ಖಾಲಿಯಾಗಿವೆ. ಕಾರಣ ಇಷ್ಟೇ,ಕೃಷಿ ಇವತ್ತು ಜೀವನೋಪಾಯವಾಗಿ ಉಳಿದಿಲ್ಲ. ಆಕಳನ್ನ ‘ಗೋಮಾತೆ’ಯೆಂದು ಪೂಜಿಸುವವರು ನಾಯಿ ಮತ್ತು ಬೆಕ್ಕು ಸಾಕಿದಂತೆ ಒಂದು ಆಕಳನ್ನ ಸಾಕಲು ತಯಾರಿಲ್ಲ!

ಇದೆಲ್ಲ ಶುರುವಾದದ್ದು ಪಟ್ಟಣಗಳ ಕಡೆಗಿನ ಆಕರ್ಷಣೆಯ ಫಲವಾಗಿ,ಅಂದರೆ ’ನೌಕರಿ’ಯ ಫಲವಾಗಿ. ಮೊದಮೊದಲು ಮಾಸ್ತರನಾಗಿ,ಬ್ಯಾಂಕ್ ನೌಕರನಾಗಿ ಅಥವಾ ಇನ್ಯಾವುದೋ ಸರ್ಕಾರಿ ನೌಕರನಾಗಿ ಊರುಬಿಡುತ್ತಿದ್ದರು. ಆದರೆ ಯಾವಾಗ ಐಟಿ-ಬಿಟಿ ಕಂಪನಿಗಳ ಅಮಲು ತಲೆಗೇರಿತೋ ಆಗಲೇ ಹಳ್ಳಿಗಳ ಹಂಚಿನ ಮನೆಗಳು ಹಠಾತ್ತನೆ ಖಾಲಿಯಾಗತೊಡಗಿದವು. ಸಗಣಿ ತೆಗೆಯಲು ಜನರಿಲ್ಲದೆ ದನಗಳು ಕಸಾಯಿಖಾನೆ ಸೇರಿದವು!

ಇವತ್ತು ರಾಮಚಂದ್ರಾಪುರ ಮಠದ ವತಿಯಿಂದ ಗೋಶಾಲೆಗಳು ತಲೆಯೆತ್ತಿವೆ,ಗೋ ಕಥೆಗಳು ನಡೆಯುತ್ತಿವೆ,ಗೋ ಉತ್ಪನ್ನಗಳು ತಯಾರಾಗುತ್ತಿವೆ,ಮಾರಾಟವಾಗುತ್ತಿವೆ! ಇದಕ್ಕೆಲ್ಲ ಬೆಂಗಳೂರಿನಿಂದಷ್ಟೇ ಅಲ್ಲದೆ ವಿದೇಶಗಳಿಂದಲೂ ಹಣ ಹರಿದುಬರುತ್ತಿದೆ. ಹಳ್ಳಿಗಳಲ್ಲಿ ಉಳಿದವರಿಂದಲೂ ‘ವಂತಿಗೆ’ ಸ್ವೀಕರಿಸಲಾಗುತ್ತಿದೆ. ಸಗಣಿಯ ವಾಸನೆ ಕೂಡ ಸೋಂಕದ ಮನೆಗಳ ಬಾಗಿಲ ಮೇಲೆ ‘ಗೋ ಪ್ರೇಮಿ ಮನೆ’ಯೆಂಬ ಫಲಕ ‘ಕಡ್ಡಾಯವಾಗಿ’ ರಾರಾಜಿಸುತ್ತಿದೆ. ಪಂಚಗವ್ಯಕ್ಕೆ ಬೇಕಾದ ಗೋಮೂತ್ರವನ್ನು ಕೂಡ ಬಾಟಲಿಯಲ್ಲಿ ತುಂಬಿ ಮಾರುವಷ್ಟರಮಟ್ಟಿಗೆ ‘ಸಂಸ್ಕೃತಿ’ ಮುಂದುವರಿದಿದೆ!

ಸ್ವಾರಸ್ಯಕರ ಸಂಗತಿಯೆಂದರೆ ಗೋ ಕಥೆ ಕೇಳದ,ಗೋ ಪ್ರೇಮಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳದ,ಗೋ ಸಂಸ್ಕೃತಿ ನಾಶವಾಗುತ್ತಿದೆಯೆಂದು ಬೊಬ್ಬೆ ಹಾಕದ ಒಂದು ವರ್ಗ ಇವತ್ತಿಗೂ ದನಗಳನ್ನ ತನ್ನ ಪಾಡಿಗೆ ತಾನು ಸಾಕುತ್ತಿದೆ! ನಾನು ವಾಸಿಸುತ್ತಿರುವ ಹಳಿಯಾಳ ಮತ್ತು ಹಳಿಯಾಳದ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಇವತ್ತಿಗೂ ದನಗಳನ್ನ ಭಾರೀ ಸಂಖ್ಯೆಯಲ್ಲಿ ಸಾಕಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಅವಿದ್ಯಾವಂತ ಹಳ್ಳಿಗರ ಜೀವನೋಪಾಯ ಕೃಷಿಯಾಗಿರುವುದು. ಸಿದ್ಧಿಗಳು,ವಡ್ಡರುಗಳು,ಮಾದರರು ಹೀಗೆ ಕೆಳವರ್ಗದವರೆಂದು ಕರೆಯಲ್ಪಡುವ,ನೋಡಲು ಕೊಳಕಾಗಿ,ಒರಟಾಗಿ ಕಾಣುವ ಇಲ್ಲಿಯ ಜನ ಲೀಟರುಗಟ್ಟಲೆ ಹಾಲನ್ನು ಪ್ರತೀ ದಿನ ಹಾಲಿನ ಕೇಂದ್ರಗಳಿಗೆ ತರುತ್ತಾರೆ. ಅದೇ ಹಾಲು ಮರುದಿನ ಬೆಂಗಳೂರಿನಂಥ ಸಿಟಿಯ ವಿದ್ಯಾವಂತರ ದಾಹವನ್ನ ತೀರಿಸುತ್ತದೆ!

ಹಳಿಯಾಳದ ಹಳ್ಳಿಗಳಂತೆ ದೇಶದ ನಾನಾ ಭಾಗಗಳಲ್ಲಿನ ‘ಹಿಂದುಳಿದ’ ಹಳ್ಳಿಗಳು ಯಾವ ಕಾರಣಕ್ಕೂ ‘ಅಭಿವೃದ್ಧಿ’ಯಾಗದಿರಲಿ,ಕೃಷಿ ಸಂಸ್ಕೃತಿ ಉಳಿಯಲಿ….

2 comments:

  1. ‘ಪುಣ್ಯಕೋಟಿ ಎಂಬ ಗೋವು......!!’

    ReplyDelete
  2. ಮತ್ತು ಬಡಪಾಯಿ ಹುಲಿ!

    ReplyDelete