November 16, 2012

ಮೂರು ತುಂಡುಗಳು

( ಅಕ್ಟೋಬರ್ ತಿಂಗಳ 'ಮಯೂರ'ದ 'ಕಲ್ಪನೆ-ಕಾವ್ಯ' ವಿಭಾಗದಲ್ಲಿನ ಈ ಚಿತ್ರಕ್ಕೆ ನನ್ನ ಪ್ರತಿಕ್ರಿಯೆ)

ಉಳ್ಳವರ ಮೈಮೇಲೆ ಮೆರೆವ
ಚಿನ್ನದ ತುಂಡುಗಳಲ್ಲ,
ಮೂರಾಬಟ್ಟೆ ಬದುಕಿನ
ಬೇರು ಭೂಮಿಗಿಳಿವಾಗಲೇ
ಕಿತ್ತು ಬೀದಿಗೆ ಬಿದ್ದ
ಪಿಂಡದ ತುಂಡುಗಳಿವು.

ಬೆನ್ನಿಗಂಟಿದ ಹೊಟ್ಟೆ ತುಂಬುವ
ಉಸಿರಿಗೆ ಯಾರ ಅನುಮತಿ?
ದಾರ ಹರಿದು ಹಾರುವ
ಪಟಕ್ಕೆ ಯಾವ ಎಲ್ಲೆ?
ಹಾವು ಏಣಿಯಾಟದ
ದಾಳಕ್ಕೆ ಯಾರ ಹಂಗು?
ನಡೆದದ್ದು ದಾರಿ,ಮಲಗಿದ್ದು ಮಂಚ
ಸವಿದದ್ದೇ ಸುಖ,ಕಂಡಿದ್ದೇ ಕನಸು!
ಕೋಗಿಲೆ,ವಸಂತ,ಚಿಗುರು
ಹೂವು,ಹಣ್ಣು,ಬೀಜ..?!
ಕ್ಷಮಿಸಿ,
ಆ ಶಬ್ದಗಳಿಲ್ಲಿ
ಚಲಾವಣೆಯಲ್ಲಿಲ್ಲ!

ಹೊಟ್ಟೆಕಿಚ್ಚಿನಿಂದ ದುರುಗುಟ್ಟದಿರಿ ಸ್ವಾಮೀ!
ನಿಮ್ಮ ಕಣ್ಣ ಬೆಂಕಿಯನ್ನೇ ಕುಡಿದು
ಕೊಡಲಿ-ಕೋಳ-ನೋಟಿನ ಸಹಿತ
ಚಟ್ಟ ಕಟ್ಟಿದ ಅಕ್ಷರಸ್ಥ ಲೋಕವ
ಸುಟ್ಟು ಮುರಿದು ತಿಂದಾವು
ಇವು
ಕೊಳ್ಳಿ ದೆವ್ವಗಳು!

2 comments: